ವೈಯಕ್ತಿಕ, ಸಮುದಾಯ ಕಾಮಗಾರಿಯಿಂದ ಅಭಿವೃದ್ಧಿ

chn july 07 gama sabhe
Published on

ಚನ್ನಗಿರಿ: ಕೇಂದ್ರ ಸರ್ಕಾರದ ನರೇಗಾ ಯೋಜನೆಯಲ್ಲಿ ಹೆಚ್ಚಾಗಿ ನೋಂದಣಿ ಮಾಡಿಕೊಂಡು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿ ಮಾಡುವುದರಿಂದ ಗ್ರಾಮಗಳ ಅಭಿವೃದ್ಧಿ ಮಾಡಬಹುದಾಗಿದೆ ಎಂದು ನೆಲ್ಲಿಹಂಕಲು ಗ್ರಾಪಂ ಅಧ್ಯಕ್ಷ ಜಿ.ಎ. ದಿನೇಶ್ ತಿಳಿಸಿದರು.

ತಾಲೂಕಿನ ನೆಲ್ಲಿಹಂಕಲು ಗ್ರಾಮದ ಶ್ರೀ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಹಾಗೂ 15ನೇ ಹಣಕಾಸು ಯೋಜನೆ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ನೆಲ್ಲಿಹಂಕಲು ಗ್ರಾಪಂ ವ್ಯಾಪ್ತಿಗೆ ಬರುವ 7 ಗ್ರಾಮಗಳಲ್ಲಿ ಸುಮಾರು 841 ಕುಟುಂಬಗಳಿವೆ. ನರೇಗಾ ಯೋಜನೆಯಡಿ ಕೇವಲ 482 ಕುಟುಂಬಗಳು ನೋಂದಣಿಯಾಗಿವೆ. ಅವುಗಳಲ್ಲಿ 275 ಕುಟುಂಬಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಹೆಚ್ಚು ಕುಟುಂಬಗಳು ನೋಂದಣಿಯಾಗಿ ಕಾರ್ಯ ನಿರ್ವಹಿಸಿದರೆ ಇನ್ನೂ ಹೆಚ್ಚು ಕಾಮಗಾರಿಗಳನ್ನು ಮಾಡಬಹುದು. ಇದರಿಂದ ಗ್ರಾಮಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು ಎಂದರು.

ತಾಲೂಕು ಲೆಕ್ಕ ಪರಿಶೋಧನಾ ತಂಡದ ವ್ಯವಸ್ಥಾಪಕ ಜೆ.ಎಂ. ಕೊಟ್ರೇಶ್ ಮಾತನಾಡಿ, ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿ 2024-25ನೇ ಸಾಲಿನ ನರೇಗಾ ಯೋಜನೆಯಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿ ಮತ್ತು 15ನೇ ಹಣಕಾಸು ಆಯೋಗ ಹಾಗೂ 4ನೇ ರಾಜ್ಯ ಹಣಕಾಸು ಆಯೋಗದ ಯೋಜನೆ ಅಡಿಯಲ್ಲಿ ಗ್ರಾಪಂ 77, ತೋಟಗಾರಿಕೆ ಇಲಾಖೆ 12 ಸೇರಿ ಎಲ್ಲ ಇಲಾಖೆಯಿಂದ ಒಟ್ಟು 90 ಕಾಮಗಾರಿ ಅನುಷ್ಠಾನಗೊಂಡಿದೆ. ಒಟ್ಟು 73,15,129 ಲಕ್ಷ ರೂ. ವೆಚ್ಚ ಪಾವತಿಸಿರುವ ಬಗ್ಗೆ ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಎದುರು ಮಂಡಿಸಿ ಅನುಮೋದನೆಯನ್ನು ಪಡೆದರು.

ಅಧ್ಯಕ್ಷತೆಯನ್ನು ಚನ್ನಗಿರಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರುದ್ರೇಶ್ ವಹಿಸಿದ್ದರು. ತೋಟಗಾರಿಕೆ ಸಹಾಯಕ ಅಧಿಕಾರಿ ಶ್ರೀನಿವಾಸ್, ನೆಲ್ಲಿಹಂಕಲು ಗ್ರಾಪಂ ಉಪಾಧ್ಯಕ್ಷೆ ಎಸ್. ಸುಮಾ, ಪಿಡಿಒ ಪವಿತ್ರಾ ಬಣಕಾರ್, ಸದಸ್ಯರಾದ ಮಂಜುನಾಥ್, ರುದ್ರನಾಯ್ಕ, ಅನುಸೂಯಮ್ಮ, ಪ್ರೇಮಾ, ಚಂದ್ರಪ್ಪ, ಅನುಸೂಯಾ ಬಾಯಿ, ಕಾರ್ಯದರ್ಶಿ ಲಿಂಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net