

ನರೇಗಲ್ಲ: ಸಮೀಪದ ಡ.ಸ. ಹಡಗಲಿ ಗ್ರಾಮದ ಶತಮಾನದಷ್ಟು ಹಳೆಯದಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರಸ್ತಿ ಕಾಮಗಾರಿಗೆ ಗ್ರಹಣ ಹಿಡಿದಿದ್ದು, ಕಾಮಗಾರಿ ಪ್ರಾರಂಭವಾದ ಒಂದು ವಾರದಲ್ಲೇ ನನೆಗುದಿಗೆ ಬಿದ್ದಿದೆ. ಇದರಿಂದಾಗಿ ವಿದ್ಯಾರ್ಥಿಗಳು ಬಿಸಿಲಿನಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ವಣವಾಗಿದೆ.
ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿತ್ತು. ಮೇಲ್ಛಾವಣಿಯ ಹಂಚುಗಳು ಮುರಿದು ಬೀಳುತ್ತಿದ್ದವು. ಕಟ್ಟಡ ಕುಸಿಯುವ ಭೀತಿ ಎದುರಾಗಿತ್ತು. ಪಾಲಕರು, ಶಿಕ್ಷಕರಲ್ಲಿ ಆತಂಕ ಮನೆ ಮಾಡಿತ್ತು. ಸಾರ್ವಜನಿಕರು ಶಾಲೆ ದುರಸ್ತಿಗಾಗಿ ಹತ್ತು ಹಲವು ಬಾರಿ ಮನವಿ ಮಾಡಿದ್ದರು. ಮುಖೋಪಾಧ್ಯಾಯರು ಅಧಿಕಾರಿಗಳಿಗೆ ಸಾಕಷ್ಟು ಪತ್ರ ಬರೆದಿದ್ದರೂ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ ಶಾಲೆಯ ಸಮಸ್ಯೆ ಬಗ್ಗೆ ‘ಶಿಥಿಲ ಕಟ್ಟಡದಲ್ಲಿ ಶಿಕ್ಷಣ’ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ಸಮಗ್ರ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಲೆ ದುರಸ್ತಿಗೆ ಮುಂದಾಗಿದ್ದರು. ತಾ.ಪಂ.ನ 2 ಲಕ್ಷ ರೂ. ಅನುದಾನದಲ್ಲಿ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಶಾಲೆಯ ಮೇಲ್ಛಾವಣಿಯ ಹೆಂಚುಗಳನ್ನು ತೆಗೆದು ತಗಡಿನ ಶೀಟ್ ಹಾಕುವ ಕಾಮಗಾರಿಯನ್ನು 15 ದಿನಗಳ ಹಿಂದೆ ಪ್ರಾರಂಭಿಸಲಾಗಿತ್ತು. ಆದರೆ, ಒಂದು ವಾರದಲ್ಲೇ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ಶಾಲೆಯ ಮೇಲ್ಛಾವಣಿಗೆ ಕಳಪೆ ತಗಡಿನ ಶೀಟ್ಗಳನ್ನು ಹಾಕಲಾಗುತ್ತಿದೆ ಎಂದು ಆರೋಪಿಸಿ ಶಾಲೆ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾ.ಪಂ. ಅಧ್ಯಕ್ಷರು ಕಾಮಗಾರಿ ಸ್ಥಗಿತಗೊಳಿಸುವಂತೆ ತಿಳಿಸಿದ್ದಾರೆ. ಇದರಿಂದಾಗಿ ಕಳೆದೊಂದು ವಾರದಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು ಬಿಸಿಲು, ಗಾಳಿಯಲ್ಲೇ ಶಿಕ್ಷಣ ಪಡೆಯಬೇಕಾಗಿದೆ.
ಇದರಲ್ಲಿ ರಾಜಕೀಯ ಆಟ ಶುರುವಾಗಿದ್ದು, ಅದಕ್ಕೇ ಕಾಮಗಾರಿಗೆ ತಡೆಯಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಏನೇ ಇದ್ದರೂ ಶೀಘ್ರ ಅದನ್ನು ಪರಿಶೀಲಿಸಿ ಕಾಮಗಾರಿ ಮುಂದುವರಿಸಬೇಕು. ಕಾಮಗಾರಿಗೆ ಬಳಸುತ್ತಿರುವ ತಗಡಿನ ಗುಣಮಟ್ಟ ನಿಜಕ್ಕೂ ಕಳಪೆಯಾಗಿದ್ದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು. ಹೀಗೆ ಕಾಮಗಾರಿ ವಿಳಂಬ ಮಾಡಿದರೆ ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಧಿಕಾರಿಗಳು ಕೂಡಲೆ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಡ.ಸ. ಹಡಗಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರಸ್ತಿಗಾಗಿ ತಾ.ಪಂ.ನಿಂದ 2 ಲಕ್ಷ ರೂ. ಅನುದಾನ ನೀಡಲಾಗಿತ್ತು. ಕಾಮಗಾರಿ ಸ್ಥಗಿತವಾಗಲು ಕಾರಣವೇನು ಎಂಬುದರ ಬಗ್ಗೆ ವಿಚಾರಿಸಿ ಪುನಃ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತೇನೆ. ಆದಷ್ಟು ಬೇಗ ಶಾಲೆ ದುರಸ್ತಿ ಕಾರ್ಯ ಮುಗಿಸಲು ತಿಳಿಸುತ್ತೇನೆ.|ಎನ್. ನಂಜುಂಡಯ್ಯ, ಬಿಇಒ, ರೋಣ
ಶಾಲೆ ದುಸ್ಥಿತಿ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ ನಂತರ ಇತ್ತೀಚೆಗೆ 2 ಲಕ್ಷ ರೂ. ಅನುದಾನ ನೀಡಲಾಗಿತ್ತು. ಅದರೆ, ಕಾಮಗಾರಿ ಸರಿಯಾಗಿ ಆಗುತ್ತಿಲ್ಲ ಎಂದು ತಡೆ ಹಿಡಿಯಲಾಗಿದೆ. ಇದರಿಂದ ಮಕ್ಕಳು ಬಿಸಿಲು, ಗಾಳಿಯಲ್ಲಿ ಪಾಠ ಕೇಳುವಂತಾಗಿದೆ. ಕಾಮಗಾರಿ ಸ್ಥಗಿತಗೊಳ್ಳಲು ಪ್ರಮುಖ ಕಾರಣವೇನು ಎಂಬುದನ್ನು ತಿಳಿದು, ಸಮಸ್ಯೆಯನ್ನು ಬಗೆ ಹರಿಸಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು.| ಆನಂದ ಪಾಟೀಲ, ಡ.ಸ. ಹಡಗಲಿ ನಿವಾಸಿ