

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಾಗ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಕಾಸರಗೋಡು ದೇಳಿಯ ಜಾಮಿಯಾ ಸ-ಆದಿಯಾ ಸಂಸ್ಥೆಯ ’ಕ್ವೀನ್ಸ್ ಲ್ಯಾಂಡ್’ ಹಾಸ್ಟೆಲ್ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಮುದಾಯಕ್ಕೆ ಉತ್ತಮ ಶಿಕ್ಷಣ ನೀಡುವುದು ಪವಿತ್ರ ಕಾರ್ಯಗಳಲ್ಲಿ ಒಂದಾಗಿದೆ. ಜಾಮಿಯಾ ಸ-ಆದಿಯ ಸಂಸ್ಥೆ ಎಂಟು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಎ.ಪಿ ಉಸ್ತಾದ್ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಮತ್ತಷ್ಟು ಶಿಕ್ಷಣ ಸೇವೆ ನಡೆಸುವಂತಾಗಲಿ ಎಂದು ಹಾರೈಸಿದರು.
ಮಾಜಿ ಸಚಿವ ಸಿ.ಟಿ. ಅಹಮ್ಮದಾಲಿ, ಬಾದಷಾ ಶಾಕಾಫಿ, ಮೌಲಾನಾ ಶಾಫಿ ಸಅದಿ, ನೌಫಲ್, ಅಬೂಬಕರ್ ಹಾಜಿ, ಮಹಮ್ಮದಲಿ ಸಕಾಫಿ, ಮಾಹಿನ್ ಹಾಜಿ, ಹುಸೇನ್ ಸಯಿದಿ, ಜಿ.ಎ ಬಾವಾ ಉಪಸ್ಥಿತರಿದ್ದರು.