

ಮೈಸೂರು: ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮತ್ತಷ್ಟು ‘ಪುಷ್ಟಿ’ ಸಿಕ್ಕಿದೆ. ಮುಖ್ಯಮಂತ್ರಿ ತವರು ಜಿಲ್ಲೆಯ 9 ಉತ್ತಮ ಎಸ್‌ಡಿಎಂಸಿಗೆ ತಲಾ ಒಂದು ಲಕ್ಷ ರೂ. ಪ್ರೋತ್ಸಾಹ ಧನದ ಪ್ರಶಸ್ತಿ ಲಭಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉತ್ತಮ ಸಾಧನೆಗೈದ ಜಿಲ್ಲೆಯ 9 ಶಾಲೆಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ‘ಪುಷ್ಟಿ’ ಪ್ರಶಸ್ತಿ ನೀಡುವುದರೊಂದಿಗೆ ಒಂದು ಲಕ್ಷ ರೂ. ಗೌರವ ಧನ ನೀಡಿ ಗೌರವಿಸಿದೆ. ಇದರಿಂದ ಶಾಲಾಭಿವೃದ್ಧಿಗೆ ಮತ್ತಷ್ಟು ಬಲ ಸಿಕ್ಕಿದೆ.
ಈ ಹಣದಲ್ಲಿ ಶಾಲೆಯಲ್ಲಿ ಗ್ರಂಥಾಲಯ ಸ್ಥಾಪನೆ, ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್, ಕ್ರೀಡಾ ಸಾಮಗ್ರಿ, ಇ-ಕಂಟೆಂಟ್ ವಿಡಿಯೋ, ಗ್ರೀನ್ ಬೋರ್ಡ್, ಪ್ರಯೋಗಾಲಯ, ಇಕೋ ಕ್ಲಬ್, ಸಿಸಿ ಟಿವಿ ಕ್ಯಾಮುರಾ ಅಳವಡಿಕೆ ಸೇರಿದಂತೆ ಮಕ್ಕಳ ಸೃಜನ ಶೀಲತೆ ಹೆಚ್ಚಿಸುವ ಚಟುವಟಿಕೆಗಳನ್ನು ನಡೆಸಬಹುದು.
ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವು, ರಾಜ್ಯ ಸಮಗ್ರ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಶಾಲೆಗಳಲ್ಲಿರುವ ಉತ್ತಮ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಗುರುತಿಸಿ ಪ್ರೋತ್ಸಾಹ ‘ಪುಷ್ಟಿ ಯೋಜನೆ’ ಯೋಜನೆಯನ್ನು ಮುಂದಾಯಿತು. ಕಳೆದ 2024-25 ನೇ ಸಾಲಿನಲ್ಲಿ ಜಿಲ್ಲೆಯ ಪ್ರತಿ ಶಾಲೆಗಳಿಗೂ ಭೇಟಿ ನೀಡಿದ ಅಧಿಕಾರಿಗಳ ತಂಡವು ಪ್ರತಿ ವಲಯ ಅಥವಾ ತಾಲೂಕು ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮೂರು ಶಾಲೆಗಳನ್ನು ಗುರುತಿಸಿತು.
ಅಂತಿಮವಾಗಿ ಆಯ್ಕೆಯಾದ 27 ಶಾಲೆಗಳಲ್ಲಿ ಪ್ರತಿ ವಲಯ ಅಥವಾ ತಾಲೂಕಿಗೆ ಒಂದರಂತೆ ಉತ್ತಮ ಎಸ್‌ಡಿಎಂಸಿ ತಂಡವನ್ನು ಗುರುತಿಸಿ ಆಯ್ಕೆ ಮಾಡಿತು. ಆಯ್ಕೆಯಾಗಿರುವ ಶಾಲೆಗಳ ಪಟ್ಟಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಜಿಲ್ಲೆಯ ಪ್ರತಿ ವಲಯ ಮತ್ತು ತಾಲೂಕಿಗೆ ಒಂದರಂತೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
ಶಾಲಾ ಎಸ್‌ಡಿಎಂಸಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದರೊಂದಿಗೆ ಸದಸ್ಯರಿಗೆ ಉತ್ತಮ ಶಾಲೆ ಹೇಗಿರಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವುದು, ಶಾಲೆಯಲ್ಲಿ ಗುಣಮಟ್ಟವನ್ನು ಹೆಚ್ಚಿಸಿ ಎಸ್‌ಡಿಎಂಸಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡುವುದು ಈ ಪುಷ್ಟಿ ಯೋಜನೆಯ ಉದ್ದೇಶವಾಗಿದೆ. ಇದರಿಂದ ಶಾಲೆಗಳ ನಡುವೆಯೇ ಸ್ಪರ್ಧೆ ಏರ್ಪಟ್ಟು ಮಕ್ಕಳಲ್ಲಿ ಕಲಿಕೆ ಆಸಕ್ತಿ ಮೂಡಿಸುತ್ತವೆ. ಇದರಿಂದ ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆ ಮಕ್ಕಳು ಪೈಪೋಟಿ ನೀಡಿದಂತಾಗಿತ್ತದೆ ಎನ್ನುವುದು ಸರ್ಕಾರದ ಉದ್ದೇಶವಾಗಿದೆ.
ಸಮಗ್ರ ಶಿಕ್ಷಣ ಇಲಾಖೆಯಿಂದ ಪುಷ್ಟಿ ಯೋಜನೆಯಡಿ ಆಯ್ಕೆಯಾಗಿರುವ ಜಿಲ್ಲೆಯ ಸರ್ಕಾರಿ ಶಾಲೆಗಳ ಎಸ್‌ಡಿಎಂಸಿಗಳಿಗೆ ಪ್ರಶಸ್ತಿಯ ಜತೆಗೆ ಒಂದು ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ.
ಪ್ರಶಸ್ತಿ ಪಡೆದ ವಿದ್ಯಾಕೇಂದ್ರಗಳು
ಮೈಸೂರು ಉತ್ತರದ ಕುಂಬಾರಕೊಪ್ಪಲು ಪ್ರೌಢಶಾಲೆ, ಮೈಸೂರು ಗ್ರಾಮಾಂತರದ ಕಡಕೊಳದ ಹಿರಿಯ ಪ್ರಾಥಮಿಕ ಶಾಲೆ, ಮೈಸೂರು ದಕ್ಷಿಣದ ಜಯನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿವೆ.
ಎಚ್.ಡಿ.ಕೋಟೆ ತಾಲೂಕು ಬೆಳಗಣ್ಣ ಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಣಸೂರಿನ ವಾರ್ಡ್ 16ರ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ, ಕೆ.ಆರ್. ನಗರದ ಸಿದ್ದಾಪುರದ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿವೆ.ಅಲ್ಲದೇ ನಂಜನಗೂಡಿನ ಹೊಸವೀಡು ಹುಂಡಿ ಕಿರಿಯ ಪ್ರಾಥಮಿಕ ಶಾಲೆ, ತಿ. ನರಸೀಪುರದ ಹೆಗ್ಗೂರು ಸರ್ಕಾರಿ ಪ್ರೌಢಶಾಲೆ ಯಾಗಿವೆ.
ಶಾಲೆಗಳ ನಡುವೆ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಪುಷ್ಟಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಎಸ್‌ಡಿಎಂಸಿಗಳ ಸಾಮರ್ಥ್ಯವೃದ್ಧಿ, ಸಮಗ್ರ ಶಿಕ್ಷಣ ಇದರ ಹಿಂದಿನ ಉದ್ದೇಶವಾಗಿದೆ. ಈ ಯೋಜನೆ ಅಡಿ ಶಾಲೆಗಳನ್ನು ಆಯ್ಕೆ ಮಾಡಿದ್ದು, ತಲಾ ಒಂದು ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗಿದೆ.
ಜವರೇಗೌಡ
ಡಿಡಿಪಿಐ