ಸದಸ್ಯರ ಸಹಕಾರದಿಂದ ಸಂಘ ಮತ್ತಷ್ಟು ಅಭಿವೃದ್ಧಿ

05SPT03
ನಾಪೋಕ್ಲುವಿನ ಬಿಲ್ಲವ ಸಮಾಜದ ಸದಸ್ಯರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
Published on

ನಾಪೋಕ್ಲು: ಬಿಲ್ಲವ ಸಮಾಜದ ಸ್ಥಾಪನೆಗೆ ನಾಪೋಕ್ಲುವಿನಲ್ಲಿ ಅಭೂತಪೂರ್ವ ಸ್ಪಂದನೆ ದೊರೆತಿದ್ದು ಸದಸ್ಯರ ಸಹಕಾರದಿಂದ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಸಂಘದ ಅಧ್ಯಕ್ಷ ಬಿ.ಎಂ. ಪ್ರತೀಪ ಹೇಳಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಬಿಲ್ಲವ ಸಮಾಜದ ಆಟಿಡೊಂಜಿ ಕಾರ್ಯಕ್ರಮದ ಬಳಿಕ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೂತನವಾಗಿ ಸ್ಥಾಪಿತವಾದ ಸಮಾಜದಲ್ಲಿ 217 ಸದಸ್ಯರಿದ್ದಾರೆ. ಬಿಲ್ಲವ ಸಮಾಜಕ್ಕೆ ಒಳಪಟ್ಟ ಪ್ರತಿಯೊಬ್ಬರ ಮನೆಗೆ ತೆರಳಿದಾಗ ಎಲ್ಲರೂ ಉತ್ತಮವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಸಂಘದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬಿಲ್ಲವ ಸಮಾಜ ಕೇವಲ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ನಡೆಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಬಡವರ ಏಳಿಗೆಗಾಗಿ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಶ್ರಮಿಸಬೇಕು ಎಂದರು.

ಸಂಘದ ವತಿಯಿಂದ ನೂತನವಾಗಿ ಮರಣ ನಿಧಿ ಸ್ಥಾಪಿಸಲಾಯಿತು. ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಬೇಕಾಗಿದ್ದರೂ ಕೆಲವು ಬದಲಾವಣೆಯೊಂದಿಗೆ ಈಗಿರುವ 21 ಸದಸ್ಯರನ್ನು ಹೊಂದಿರುವ ಆಡಳಿತ ಮಂಡಳಿಯೇ ಮುಂದಿನ ಮೂರು ವರ್ಷಕ್ಕೆ ಮುಂದುವರಿಯುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.

ಸಮಾಜದ ಉಪಾಧ್ಯಕ್ಷ ವಸಂತ , ಜಗನ್ನಾಥ್, ಕಾರ್ಯದರ್ಶಿ ಲೋಹಿತ್, ಸಂಘಟನಾ ಕಾರ್ಯದರ್ಶಿ ನಾಗರಾಜ್, ಖಜಾಂಚಿ ದೀಪಕ್ ಬಿ.ಡಿ., ನಿರ್ದೇಶಕರು, ನಿವೃತ್ತ ಸೈನಿಕರು, ಹಿರಿಯರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಜರುಗಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net