ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದಿಂದ ಮತ್ತಷ್ಟು ಅಭಿವೃದ್ಧಿ

h14-Joshi Rajastani 2
Published on

ಹುಬ್ಬಳ್ಳಿ: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಆರಂಭಕ್ಕೆ ಎಲ್ಲ ರೀತಿಯ ತಯಾರು ಮಾಡಿಕೊಳ್ಳಲಾಗಿದೆ. ಆದರೆ, ವನ್ಯಜೀವಿ ಮಂಡಳಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಅನುಮತಿ ಸಿಕ್ಕ ನಂತರ ಕಾರ್ಯಾರಂಭ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾನ ಮಾಡಿದರು.
ರಾಜಸ್ತಾನಿ ಜಾಗರೂಕ ಮಂಚ್ ಹುಬ್ಬಳ್ಳಿ ವತಿಯಿಂದ ನಗರದ ರಾಯ್ಕರ್ ಗೆಸ್ಟ್ ಹೌಸ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ರಾಜಸ್ತಾನಿ ಸಮಾಜದವರ ಸಭೆಯಲ್ಲಿ ಅವರು ಮಾತನಾಡಿದರು.
ರೈಲ್ವೆ ಇಲಾಖೆಗೆ ಅತ್ಯಂತ ಹೆಚ್ಚು ಆದಾಯ ಹೋಗುವುದು ನಮ್ಮ ಕಲಿದ್ದಲು ಮತ್ತು ಗಣಿ ಇಲಾಖೆಯಿಂದ. ಬಹಳಷ್ಟು ಸಲ ರೈಲ್ವೆ ಸಚಿವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಅಂಕೋಲಾ ರೈಲ್ವೆ ಮಾರ್ಗ ಆರಂಭದಿಂದ ಉತ್ತರ ಕರ್ನಾಟಕದ ಕೈಗಾರಿಕಾ ವಲಯದ ಬಾಗಿಲು ತೆರೆದು ಇನ್ನಷ್ಟು ಅಭಿವೃದ್ಧಿ ಆಗಲಿದೆ ಎಂದರು.
ಹುಬ್ಬಳ್ಳಿಯಿಂದ ಜೋಧಪುರಕ್ಕೆ ಹೋಗುವ ರೈಲ್ವೆ ಬಗ್ಗೆ ಮಾತನಾಡಿದ್ದೇನೆ. ಮತ್ತೊಮ್ಮೆ ಮಾತನಾಡುವೆ. ಜೋಧಪುರ ಮತ್ತು ಅಹಮದಾಬಾದ್‌ಗೆ ತೆರಳಲು ವಿಮಾನ ಸಂಚಾರಕ್ಕೆ ಬೇಡಿಕೆ ಇದೆ. ಈ ಕುರಿತು ಕೂಡ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜತೆಗೆ ಚರ್ಚಿಸುವೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರಾಜಸ್ತಾನಿಗಳು ಬೇಡುವವರಲ್ಲ, ಕೊಡುವವರು. ಹಾಗಾಗಿ ನಮಗೆ ಮತ ಕೊಟ್ಟೇ ಕೊಡುತ್ತಾರೆ. ಪ್ರಲ್ಹಾದ ಜೋಶಿ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ವಿನಂತಿಸಿದರು.
ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಚೇರ್ಮನ್ ಭವರಲಾಲ್ ಸಿ. ಜೈನ್ ಮಾತನಾಡಿ, ನಮ್ಮ ಸಮಾಜದವರು ಓಡಾಡಲು ರೈಲ್ವೆ ಹಾಗೂ ವಿಮಾನ ಸೇವೆ ಅಗತ್ಯ. ಜೋಧಪುರ ಮತ್ತು ಅಹಮದಾಬಾದ್‌ಗೆ ತೆರಳಲು ವಿಮಾನ, ಹುಬ್ಬಳ್ಳಿಯಿಂದ ಜೋಧಪುರಕ್ಕೆ ಹೋಗಲು ರೈಲ್ವೆ ಸೇವೆ ಬೇಕು. ಈ ನಿಟ್ಟಿನಲ್ಲಿ ತಾವು ಈ ಬೇಡಿಕೆ ಈಡೇರಿಸುವ ನಂಬಿಕೆ ಇದೆ. ಪ್ರಲ್ಹಾದ ಜೋಶಿ ಅವರು ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ. ಅವರು ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ವಿವಿಧ ಸಮಾಜದ ಪ್ರಮುಖರಾದ ಊಕ್‌ಚೆಂದ್ ಬಾಫಣಾ, ಜಯಂತಿಲಾಲ್ ಪರಮಾರ, ನರಪತ್ ಸಿಂಗ್, ಅಮಲೋಕಚೆಂದ್ ಬಾಗರೇಚಾ, ಸೋಪರಮ್, ಜಮತರಾಮ್ ದೇವಾಸಿ, ಸುರೇಶ ಸಿ. ಜೈನ್, ಭೂರಸಿಂಗ್ ರಾಜಪುರೋಹಿತ, ಗೌರಿಶಂಕರ ಮೋಟ್, ಭವರಲಾಲ್ ಆರ್ಯ, ರಾಮಜಿ ಪಟೇಲ್, ಅನೂಪ್‌ಜೀ ದರ್ಜಿ, ತ್ರಿವೇಂದ್ರ ಖತ್ರಿ, ಪುರುಷೋತ್ತಮ ರಾವಲ್, ಸುರೇಶ ಲಖಾರ, ಹನುಮಾನ್ ರಾಥೋಡ್, ಸತೀಶ ಮಾಳಿ, ಹೇಮ್‌ಜಿ ಪ್ರಜಾಪತ, ಹರೀಶ ಸುತಾರ, ಪ್ರಕಾಶ ಬಾಫಣಾ, ಅಭಿಷೇಕ ಮೆಹ್ತಾ, ಹಿತೇಶ ಜೈನ್, ಮೇಘರಾಜ ಭಲಗತ್, ಪಂಕಜ್ ಬಾಫಣಾ, ಜಿತೇಂದ್ರ ಬಾಫಣಾ, ಧರ್ಮೇಂದ್ರ ಮಾಳಿ, ಚಂದ್ರಶೇಖರ ಗೋಕಾಕ, ಸುಭಾಷಸಿಂಗ್ ಜಮಾದಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net