ವಿದ್ಯುತ್ ಇಲ್ಲದೆ ಶವಸಂಸ್ಕಾರಕ್ಕೆ ಪರದಾಟ

Vidyanagar
Published on

ಹುಬ್ಬಳ್ಳಿ: ವಿದ್ಯಾನಗರ ಸ್ಮಶಾನದಲ್ಲಿ ವಿದ್ಯುತ್ ಪೂರೈಕೆಯಲ್ಲಿನ ಅವ್ಯವಸ್ಥೆಯಿಂದ ಶವಸಂಸ್ಕಾರದ ವೇಳೆ ತೀವ್ರ ಪರದಾಡಿದ ಘಟನೆ ಸೋಮವಾರ ನಡೆದಿದೆ.

ನಿವೃತ್ತ ಪ್ರಾಧ್ಯಾಪಕ ಬಸವರಾಜ ಬಸಪ್ಪ ಶಿವನಗುತ್ತಿ ಅವರ ಮೃತದೇಹವನ್ನು ಅಂತ್ಯಕ್ರಿಯೆಗೆ ಸಂಜೆ ವೇಳೆ ತರಲಾಗಿತ್ತು. ಸಾಕಷ್ಟು ವಿಶಾಲವಾಗಿರುವ ರುದ್ರಭೂಮಿಯಲ್ಲಿ ಹೈ ಮಾಸ್ಟ್ ದೀಪ ಬಂದ್ ಆಗಿತ್ತು. ಇದರಿಂದ ಸ್ಮಶಾನದಲ್ಲಿ ಕತ್ತಲೂ ಆವರಿಸಿತ್ತು. ಅಕ್ಕ ಪಕ್ಕದವರನ್ನು ಗುರುತಿಸಲಾಗದಷ್ಟು ಕಗ್ಗತ್ತಲು ಇತ್ತು. ಕುಟುಂಬದ ಸದಸ್ಯರು, ಆಪ್ತರು ತೀವ್ರ ತೊಂದರೆ ಅನುಭವಿಸಿದರು. ಕಾರ್‌ನ ಹೆಡ್ ಲೈಟ್, ಮೊಬೈಲ್ ಪೋನ್ ಟಾರ್ಚ್ ಬೆಳಕಿನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

ರಾತ್ರಿ ವೇಳೆ ಸೂಕ್ತ ಕಾವಲು ವ್ಯವಸ್ಥೆ ಇಲ್ಲದೆ ವಿದ್ಯಾನಗರ ಸ್ಮಶಾನವು ಕುಡುಕರ, ಕಿಡಿಗೇಡಿಗಳ ತಾಣವಾಗಿದೆ. ಇವರು ಹೈಮಾಸ್ಟ್ ದೀಪ, ವಿದ್ಯುತ್ ಸಂಪರ್ಕವನ್ನು ಪದೇ ಪದೆ ಹಾಳುಗೆಡುವುತ್ತಿದ್ದಾರೆ. ಹೈಮಾಸ್ಟ್ ದೀಪ ಹಾಳಾಗಿದ್ದರಿಂದ ಸ್ಮಶಾನದಲ್ಲಿ ಬೆಳಕಿನ ವ್ಯವಸ್ಥೆ ಇರಲಿಲ್ಲ ಎಂದು ಹು-ಧಾ ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಆನಂದ ಕಾಂಬಳೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net