

ಮೈಸೂರು: ಎನ್‌ಟಿಎಂ ಶಾಲೆ ಉಳಿವಿಗಾಗಿ ನಡೆದ ಹೋರಾಟದ ಶವಯಾತ್ರೆಯನ್ನು ಕರ್ನಾಟಕ ಕಾವಲುಪಡೆ ಕಾರ್ಯಕರ್ತರು ಕೈಗೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇದರೊಂದಿಗೆ ಹೋರಾಟವನ್ನೂ ಕೊನೆಗೊಳಿಸಿದರು.
ನಾಮಾವಶೇಷಗೊಂಡಿರುವ ಎನ್‌ಟಿಎಂ ಶಾಲೆಯ ಬಳಿ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಶವಯಾತ್ರೆ ನಡೆಸಿ ಘೋಷಣೆ ಕೂಗಿ ಕಿಡಿಕಾರಿದರು.
ಸಂಘಟನೆಯ ಅಧ್ಯಕ್ಷ ಎಂ.ಮೋಹನ್‌ಕುಮಾರ್‌ಗೌಡ ಮಾತನಾಡಿ, ಎನ್‌ಟಿಎಂ ಶಾಲೆಯನ್ನು ಉಳಿಸುತ್ತೇವೆಂದು ಮಹಾನುಭಾವರು ಹೋರಾಟ ಆರಂಭಿಸಿದರು. ಕ್ರಮೇಣ ಆ ಹೋರಾಟದ ಜವಾಬ್ದಾರಿಯನ್ನು ನಮ್ಮ ಸಂಘಟನೆಯ ಹೆಗಲಿಗೆ ರವಾನಿಸಿ ಅವರು ನುಣುಚಿಕೊಂಡರು. ಹೀಗಾಗಿ, ನಾವು ಮುನ್ನಡೆಸಿಕೊಂಡು ಹೋಗುತ್ತಿರುವ ಚಳವಳಿ ದಿನ ಕಳೆದಂತೆ ನಮ್ಮ ಪಾಲಿಗೆ ಹೆಣಭಾರವಾಗಿ ಪರಿಣಮಿಸಿದೆ. ನಮ್ಮ ಸೀಮಿತ ಶಕ್ತಿಯನ್ನು ಬಳಸಿಕೊಂಡು ಚಳವಳಿಯನ್ನು ಮುನ್ನಡೆಸಲು ಸಾಧ್ಯವಾಗದೆ ಹೈರಾಣಾಗಿದ್ದೇವೆ ಎಂದು ನೋವಿನಿಂದ ಹೇಳಿದರು.
ಇದೀಗ ಈ ಚಳವಳಿ ಅಂತ್ಯಸಂಸ್ಕಾರದ ಮೆರವಣಿಗೆಯಂತೆ ಗೋಚರಿಸುತ್ತಿದೆ. ಹೆಣ ಹೊತ್ತು ಸಾಗುತ್ತಿರುವ ನಮಗೆ ಅದರ ಭಾರ ಹೊರಲು ಸಾಧ್ಯವಾಗುತ್ತಿಲ್ಲ. ಸುತ್ತಲಿನಲ್ಲೂ ಸ್ಮಶಾನಗಳೂ ಕಾಣಿಸುತ್ತಿಲ್ಲ. ಎಲ್ಲಿ ಗುಂಡಿ ತೋಡಿ ಹೆಣ ಹೂಳಬೇಕು ಎಂಬುದೂ ಗೊತ್ತಾಗುತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಜನರು, ಜನಪ್ರತಿನಿಧಿಗಳು ಸೇರಿದಂತೆ ಯಾರ ಬೆಂಬಲವೂ ಸಿಗದೆ ಕಂಗಾಲಾಗಿರುವ ನಾವು ಈ ಚಳವಳಿಯನ್ನು ಅಂತ್ಯಗೊಳಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದು, ಈ ಹಿಂದಿನ ಅನೇಕ ಹೋರಾಟಗಳಿಗೆ ತಾರ್ಕಿಕ ಅಂತ್ಯ ಕಂಡುಕೊಳ್ಳಲಾಗಿದೆ. ಆದರೆ, ಎಂಟಿಎಂ ಶಾಲಾ ಹೋರಾಟದಲ್ಲಿ ಘೋಷಣೆಯನ್ನೂ ಕೇಳಿಸಿಕೊಳ್ಳುವ ವ್ಯವಧಾನ ಕೂಡ ಯಾರಿಗೂ ಇಲ್ಲ. ಚಳವಳಿಯನ್ನು ವ್ಯವಸ್ಥಿತವಾಗಿ ಹತ್ತಿಕ್ಕುವಲ್ಲಿ ಹಲವು ಶಕ್ತಿಗಳು ಯಶಸ್ವಿಯಾಗಿವೆ.
ಆದ್ದರಿಂದ ಹೆಗಲ ಮೇಲಿರುವ ಈ ಚಳವಳಿಯ ಶವವನ್ನು ನಾವು ಮಾರ್ಗಮಧ್ಯದಲ್ಲೇ ಇಳಿಸುವ ನಿರ್ಧಾರಕ್ಕೆ ಬಂದಿದ್ದೇವೆ. ನಾಡಿನ ಜನತೆಯ ಕ್ಷಮೆ ಇರಲಿ ಎಂದು ಕೋರಿದರು.
ಡಿ.ಆರ್.ಕರೀಗೌಡ, ರವೀಂದ್ರ, ರವಿ, ಜಯರಾಮ್, ಈಶ್ವರ್, ಟಿ.ರವಿಗೌಡ, ಬಿ.ಮಹದೇವನ್, ನಾರಾಯಣ, ಆರ್.ಮಹದೇವ, ಆರ್.ರಾಜ್‌ಕುಮಾರ್, ಟಿ.ಶ್ರೀನಿವಾಸ್, ಕಾಳಪ್ಪಮ ಚನ್ನೇಗೌಡ ಇನ್ನಿತರರಿದ್ದರು