

ವಿಜಯಪುರ: ಪರಿಶಿಷ್ಟ ಜಾತಿಯವರ ಸ್ಮಶಾನಕ್ಕೆ ತೆರಳಲು ಉಂಟಾಗಿರುವ ದಾರಿ ಸಮಸ್ಯೆ ಇತ್ಯರ್ಥಪಡಿಸಲು ಆಗ್ರಹಿಸಿ ಹೋರಾಟ ಸ್ಥಳದಲ್ಲಿ ಶವ ಇಟ್ಟುಕೊಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ಟನೆ ಸೋಮವಾರ ಮಖಣಾಪುರ ಗ್ರಾಮದಲ್ಲಿ ನಡೆದಿದೆ.
ವಿಜಯಪುರ ತಾಲೂಕು ಕೇಂದ್ರಕ್ಕೆ ಹತ್ತಿರದಲ್ಲಿರುವ ಮಖಣಾಪುರದಲ್ಲಿ ಸೋಮವಾರ ಪರಿಶಿಷ್ಟ ಜಾತಿಯ ಶಾಂತವ್ವ ಗುಡಸಲಮನಿ (75) ಎಂಬ ವೃದ್ಧೆ ಮೃತಪಟ್ಟಿದ್ದರು.
ಪರಿಶಿಷ್ಟ ಜಾತಿಯವರು ತೀರಿಕೊಂಡಾಗ ಅಂತ್ಯಸಂಸ್ಕಾರಕ್ಕೆಂದು ಮೀಸಲಾದ ಸ್ಮಶಾನಕ್ಕೆ ಹೋಗಲು ಸಮರ್ಪಕ ದಾರಿಯೇ ಇಲ್ಲ. ಮಧ್ಯದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಜಮೀನಿದ್ದು, ಅವರು ಅಂತ್ಯಂಸ್ಕಾರಕ್ಕೆ ತೆರಳಲು ಅವಕಾಶ ನೀಡಲ್ಲ ಎಂದಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ಗ್ರಾಪಂ ಪಿಡಿಒ ಹಾಗೂ ತಾಲೂಕು ದಂಡಾಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಯತ್ನಿಸಿದರಾದರೂ ಮಾಲೀಕ ಅಂತ್ಯಸಂಸ್ಕಾರಕ್ಕೆ ಮಾತ್ರ ದಾರಿ ಮಾಡಿಕೊಡಲಾಗುವುದು. ನಂತರದಲ್ಲಿ ಹಾದು ಹೋಗಲು ಅವಕಾಶ ಕೊಡಲ್ಲ ಎಂದರು. ಹೀಗಾಗಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಯಿತಾದರೂ ಅಂತ್ಯಸಂಸ್ಕಾರವಂತೂ ನೆರವೇರಿಸಲಾಯಿತು. ನಂತರ ಸಮಸ್ಯೆ ಕುರಿತು ಚರ್ಚಿಸಿ ಪರಿಹಾರ ಕಲ್ಪಿಸಲಾಗುವುದೆಂದು ತಹಸೀಲ್ದಾರ್ ಪ್ರಶಾಂತ ಚನಗೊಂಡ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಮುದಾಯದ ಜನ ಸಹಮತ ವ್ಯಕ್ತಪಡಿಸಿದರೆಂದು ಸ್ಥಳಿಯರು ತಿಳಿಸಿದರು.