ಶಾಸಕ ಸತ್ಯನಾರಾಯಣ ಪಂಚಭೂತಗಳಲ್ಲಿ ಲೀನ ; ಭುವನಹಳ್ಳಿಯಲ್ಲಿ ಅಂತ್ಯಸಂಸ್ಕಾರ

5 Sira-01
Published on

ತುಮಕೂರು/ಶಿರಾ : ನ್ಯುಮೋನಿಯಾದಿಂದ ಮಂಗಳವಾರ ನಿಧನರಾದ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ ಅವರ ಅಂತ್ಯ ಸಂಸ್ಕಾರ ಬುಧವಾರ ಸಂಜೆ ಹುಟ್ಟೂರಾದ ಭುವನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೇರವೇರಿತು.

ಕುಂಚಿಟಿಗ ಸಮುದಾಯದ ವಿಧಿ-ವಿಧಾನಗಳಂತೆ ಪುತ್ರ ಎಸ್.ಪ್ರಕಾಶ್ ಅಂತ್ಯಕ್ರಿಯೆ ನೇರವೇರಿಸಿದರು. ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಂತಿಮನಮನ ಸಲ್ಲಿಸಿದರು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಪತ್ನಿ ಅಮ್ಮಾಜಮ್ಮ ಸೇರಿ ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಭಾಗಿಯಾಗಿದ್ದರು. ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಎಸ್ಪಿ ಡಾ.ಕೆ.ವಂಶಿಕೃಷ್ಣ ನೇತೃತ್ವದಲ್ಲಿ ಎಲ್ಲ ಅಧಿಕಾರಿಗಳು, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮುಖಂಡರು ಪುಷ್ಪಗುಚ್ಛ ನೀಡಿ ನಮನ ಸಲ್ಲಿಸಿದರು. ಪಂಚಭೂತಗಳಲ್ಲಿ ಸತ್ಯನಾರಾಯಣ ಪಾರ್ಥೀವ ಶರೀರ ಲೀನವಾದ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ‘ಅಜಾತಶತ್ರು ಸತ್ಯಣ್ಯ’ ಅಭಿಮಾನಿಗಳ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.

ಅಂತಿಮ ದರ್ಶನ ಪಡೆದ ಮಾಜಿ ಪ್ರಧಾನಿ: ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಎ.ನಾರಾಯಣಸ್ವಾಮಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ, ಕೊರಟಗೆರೆ ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಹನುಮಂತನಾಥ ಸ್ವಾಮೀಜಿ, ಜೆಡಿಎಸ್ ಯುವ ಘಟಕದ ರಾಜಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಡಿ.ಸಿ.ಗೌರಿಶಂಕರ್, ಎಂ.ವಿ.ವೀರಭದ್ರಯ್ಯ, ಡಾ.ಎಚ್. ಡಿ.ರಂಗನಾಥ್, ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ಕಣ್ಣೀರಾದ ಎಚ್ಡಿಡಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತುಮಕೂರು ಜೆಡಿಎಸ್ ಕಚೇರಿಗೆ ಭೇಟಿ ನೀಡಿದ್ದರು. ಅಲ್ಲಿಂದ ಅಂತಿಮ ಸಂಸ್ಕಾರದಲ್ಲಿಯೂ ಭಾಗಿಯಾಗಿದರು. ಸತ್ಯನಾರಾಯಣ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದರು, ನನ್ನ ಮಾನಸ ಪುತ್ರರಂತಿದ್ದ ಅವರು ಅಧಿಕಾರಕ್ಕಾಗಿ ಎಂದೂ ಕೆಟ್ಟ ಮಾರ್ಗ ತುಳಿಯಲಿಲ್ಲ. ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಅವರ ಅಗಲಿಕೆ ಜೆಡಿಎಸ್‌ಗೆ ನಷ್ಟವಾಗಿದೆ, ನನಗೂ ಅತೀವ ದುಃಖ ತಂದಿದೆ ಎಂದು ಕಣ್ಣೀರಾದರು. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಬಸವರಾಜಹೊರಟ್ಟಿ, ಎಸ್.ಆರ್.ಶ್ರೀನಿವಾಸ್, ಬೆಮೆಲ್ ಕಾಂತರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಡಾ. ಎಸ್.ರಫೀಕ್ ಅಹ್ಮದ್, ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಕುಂಚಿಟಿಗ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರಾಜಕೀಯ ಮುಖಂಡರು ತುಮಕೂರಿನಲ್ಲಿ ಅಂತಿಮ ದರ್ಶನ ಪಡೆದರು.

ಗಣ್ಯರು ಭಾಗಿ : ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಬಿ.ಕೆ.ಮಂಜುನಾಥ್, ರಾಜೇಶ್‌ಗೌಡ, ಮಾಜಿ ಸಂಸದ ಮೂಡಲಗಿರಿಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಉಗ್ರೆಶ್, ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಹಾಗೂ ಅನೇಕ ಗಣ್ಯರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಮಧುಗಿರಿ ಉಪವಿಬಾಗಾಧಿಕಾರಿ ನಂದಿನಿದೇವಿ, ತಹಸೀಲ್ದಾರ್ ನಾಹಿದ ಜಂ ಜಂ ಉಪಸ್ಥಿತರಿದ್ದರು.

ಜನಪ್ರಿಯತೆಗೆ ಸಾಕ್ಷಿ: ಭುವನಹಳ್ಳಿ ಬ್ಯಾಟಪ್ಪ, ಕಾಮಕ್ಕ ದಂಪತಿಗೆ 1952ರ ಜುಲೈ 20 ರಂದು ಜನಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಧುಗಿರಿ ತಾಲೂಕು ದಂಡಿನದಿಬ್ಬದಲ್ಲಿ, ಪದವಿ ಮಂಡ್ಯ ನಗರದಲ್ಲಿ ಮುಗಿಸಿ ತುಮಕೂರಿನ ವಿದ್ಯೋದಯ ಕಾಲೇಜಿನಲ್ಲಿ ಕಾನೂನು ಪದವೀಧರರಾಗಿ ಸತ್ಯನಾರಾಯಣ ರಾಜಕೀಯದಲ್ಲಿ ಬೆಳೆದಿದ್ದು ಇತಿಹಾಸ. ಎಪಿಎಂಸಿ ನಿರ್ದೇಶಕರಾಗಿ ರಾಜಕೀಯ ಆರಂಭಿಸಿ 1994 ರಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದು ಸಚಿವರಾಗಿ ಸೇವೆ ಸಲ್ಲಿಸಿ ಜನರ ಮನಸ್ಸಿನಲ್ಲಿ ಉಳಿದರು. ಅವರ ಅಂತಿಮ ಕಾರ್ಯದಲ್ಲಿ ಪಕ್ಷಾತೀತವಾಗಿ ಭಾಗಿಯಾಗಿದ್ದ ಸಾವಿರಾರು ಸಂಖ್ಯೆಯ ಜನರೇ ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ನನ್ನ ಕಷ್ಟಕಾಲದಲ್ಲಿ ಕಳೆದ 30 ವರ್ಷದ ಒಡನಾಡಿ ಸತ್ಯನಾರಾಯಣ ಸಾವು ನೋವು ತಂದಿದೆ. ಪಕ್ಷಾಂತರದ ವ್ಯಾಮೋಹವಿಲ್ಲದ ವ್ಯಕ್ತಿ. ದೊಡ್ಡ ಪ್ರಮಾಣದ ಹಣದ ಆಮಿಷ ತಿರಸ್ಕರಿಸಿ ನಮ್ಮ ಪಕ್ಷದ ಮುಖಂಡರಾಗಿದ್ದರು, ಹಾದಿ ತಪ್ಪುವ ರಾಜಕಾರಣಿಯಾಗಿರದೆ ನನ್ನ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಆತ್ಮೀಯ ಸ್ನೇಹಿತ, ತುಂಬು ಕುಟುಂಬವಿದ್ದು ಅವರ ಸಾವು ನೋವು ತಂದಿದೆ. ಪಕ್ಷವು ಅವರ ಕುಟುಂಬದ ಬೆನ್ನಿಗಿರಲಿದೆ. ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ ಸತ್ಯನಾರಾಯಣಗೂ ನನಗೂ ಯಾವುದೇ ಭಿನ್ನಭಿಪ್ರಾಯವಿಲ್ಲ. ಆತ್ಮೀಯತೆ ಇತ್ತು. ನಾವಿಬ್ಬರು ವಿಭಿನ್ನ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೆವು. ಅವರು ಶಿರಾದಿಂದ, ನಾನು ಕಳ್ಳಂಬೆಳ್ಳದಿಂದ. ಕ್ಷೇತ್ರವೊಂದೇ ಆದ ನಂತರವೂ ನನ್ನಲ್ಲೂ ಹಾಗೂ ಆತನಲ್ಲೂ ವೈಯಕ್ತಿಕ ದ್ವೇಷವಿರಲಿಲ್ಲ. ವೈಯಕ್ತಿಕವಾಗಿ ಕಾದಾಡಿರಲಿಲ್ಲ. ಟಿ.ಬಿ.ಜಯಚಂದ್ರ ಮಾಜಿ ಸಚಿವ ಸರಳತನದಲ್ಲೇ ಕ್ಷೇತ್ರದ ಜನತೆಯ ಮನಗೆದ್ದು ಮೂರು ಬಾರಿ ಶಾಸಕರು ಹಾಗೂ ಸಚಿವರಾಗಿದ್ದ ಬಿ.ಸತ್ಯನಾರಾಯಣ ಸಾವು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net