

ಬೆಳಗಾವಿ: ಚನ್ನೈ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ತಲೆಗೆ ಆಕಸ್ಮಿಕ ಗುಂಡು ತಗುಲಿ ಫೆ. 12ರಂದು ಮೃತಪಟ್ಟಿದ್ದ ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಯೋಧ ಪ್ರವೀಣ ಸುಭಾಷ ಖಾನಗೌಡ್ರ (24) ಅವರ ಅಂತ್ಯಕ್ರಿಯೆಯು ಶುಕ್ರವಾರ ಯೋಧನ ಸ್ವಗ್ರಾಮ ಕಲ್ಲೋಳಿಯಲ್ಲಿ ಸಕಲ ಸರ್ಕಾರಿ ಗೌರವದಿಂದ ಜರುಗಿತು.
ಭಾರತೀಯ ನೌಕಾಪಡೆಯ ವಿಶೇಷ ವಾಹನದಲ್ಲಿ ಪಾರ್ಥಿವ ಶರೀರವನ್ನು ಸಂಗನಕೇರಿ ಕ್ರಾಸ್‌ದಿಂದ ಕಲ್ಲೋಳಿಯ ವರೆಗೆ ಯುವಕರು ಮತ್ತು ಮಾಜಿ ಸೈನಿಕರ ನೂರಾರು ಬೈಕ್‌ಗಳ ಜೊತೆಯಲ್ಲಿ ಬರಮಾಡಿಕೊಳ್ಳಲಾಯಿತು.
ಕಲ್ಲೋಳಿಯ ಪುರ ಪ್ರವೇಶದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ದಾರಿಯ ಎರಡು ಬದಿಯಲ್ಲಿ ಪುಷ್ಪವೃಷ್ಟಿ ಮಾಡಿ ಗೌರವ ಸಲ್ಲಿಸಿದರು. ಗಣ್ಯರು, ಮಾಜಿ ಸೈನಿಕರು, ಪಟ್ಟಣದ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಯುವಕರು ಮೆರವಣಿಗೆಯಲ್ಲಿ ಭಾಗವಹಿಸಿ 'ಅಮರ ರಹೇ ಪ್ರವೀಣ, ಅಮರ ರಹೇ' ಎಂದು ಘೋಷಣೆಗಳು, ಮತ್ತು `ಭಾರತ ಮಾತಾಕೀ ಜೈ' 'ವಂದೇ ಮಾತರಂ' ಎಂದು ಘೋಷಣೆಗಳು ಮೊಳಗಿದವು.
ಧ್ವನಿವರ್ಧಕದಲ್ಲಿ ದೇಶ ಭಕ್ತಿ ಹಾಡುಗಳು ತೇಲಿ ಬರುತ್ತಿದ್ದವು. ಯೋಧನ ಪಾರ್ಥಿವ ಶರೀರವನ್ನು ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ರಂಗ ಮಂಟಪದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಜನರು ಅಂತಿಮ ದರ್ಶನವನ್ನು ಪಡೆದುಕೊಂಡರು.