

ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಯೋಧ ರಾಜಶೇಖರ ಮುಜಗೊಂಡ ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವದೊಂದಿಗೆ ಶನಿವಾರ ನೆರವೇರಿತು.
ಪುಣೆಯ ಮಿಲಿಟರಿ ಆಸ್ಪತ್ರೆಯಲ್ಲಿ ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟಿದ್ದ ಯೋಧನ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ಸ್ವಗ್ರಾಮ ಲಚ್ಯಾಣಕ್ಕೆ ತರಲಾಯಿತು. ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಯೋಧನ ಅಗಲಿಕೆಗೆ ತಂದೆ ಶರಣಪ್ಪ, ತಾಯಿ ಸುಶೀಲಾಬಾಯಿ, ಸಹೋದರರಾದ ಸೈನಿಕ ಸುರೇಶ, ಸಾರಿಗೆ ಸಂಸ್ಥೆಯ ವಾಹನ ಚಾಲಕ ಗುರುನಾಥ ಹಾಗೂ ಬಂಧು ಬಳಗದವರು ಕಣ್ಣೀರಿಟ್ಟರು.
ಯೋಧನ ಪಾರ್ಥಿವ ಶರೀರದ ದರ್ಶನಕ್ಕೂ ಮುನ್ನ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಿದರು. ಅಲಂಕೃತ ವಾಹನದಲ್ಲಿ ನಡೆದ ಯೋಧನ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಜನಸಾಗರವೇ ಹರಿದು ಬಂದಿತ್ತು. ಈ ಮೆರವಣಿಗೆಯ ರಸ್ತೆಯುದ್ದಕ್ಕೂ ಶಾಲಾ ಮಕ್ಕಳು, ಬಂಧುಗಳು, ಸ್ನೇಹಿತರು, ಮಹಿಳೆಯರು ಕಣ್ಣೀರು ಹಾಕಿದರು. ವಾದ್ಯ ಮೇಳಗಳ ದೇಶಭಕ್ತಿ ಗೀತೆಯೊಂದಿಗೆ ಮೆರವಣಿಗೆಯು ಸರ್ಕಾರಿ ಪ್ರೌಢಶಾಲಾ ಆವರಣ ತಲುಪುತ್ತಿದ್ದಂತೆ ಯುವಕರು ರಾಜಶೇಖರ ಅಮರ ರಹೇ, ಜೈ ಜವಾನ್ ಜೈ ಕಿಸಾನ್, ಒಂದೇ ಮಾತರಂ ಎಂಬ ಘೋಷ ವಾಕ್ಯಗಳನ್ನು ಕೂಗಿ ಜೈಕಾರ ಹಾಕಿದರು.
ನಂತರ ಪ್ರೌಢಶಾಲಾ ಆವರಣದಲ್ಲಿ ಯೋಧನ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಲಚ್ಯಾಣ ಹಾಗೂ ಬಂಥನಾಳ ಮಠದ ಪೀಠಾಧೀಶ ಡಾ. ವೃಷಭಲಿಂಗ ಮಹಾಶಿವಯೋಗಿಗಳು, ಶಾಸಕ ಯಶವಂತರಾಯಗೌಡ ಪಾಟೀಲ, ತಹಸೀಲ್ದಾರ್ ನಾಗೇಂದ್ರ ಹಿರೇಮಠ, ಮಾಜಿ ಸೈನಿಕರು, ಗ್ರಾಮದ ಗಣ್ಯರು ಹೂವಿನಮಾಲೆ ಹಾಕಿ ಗೌರವ ಸಲ್ಲಿಸಿದರು. ನಂತರ ಮಿಲಿಟರಿ ಪಡೆ ಹಾಗೂ ಸಶಸ್ತ್ರ ಮೀಸಲು ಪಡೆ ತಂಡದವರು ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸುವ ಮೂಲಕ ಹುತಾತ್ಮ ಯೋಧನಿಗೆ ಗೌರವ ಸಮರ್ಪಿಸಿದರು.
ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಕುಟುಂಬದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹುತಾತ್ಮ ಯೋಧ ರಾಜಶೇಖರನ ಅಂತ್ಯಕ್ರಿಯೆ ನೆರವೇರಿತು. ಯೋಧನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೆಲ ಕ್ಷಣ ಮೌನ ಆಚರಿಸಿದರು. ಮತ್ತೆ ಕೆಲವು ಗಣ್ಯರು ತನ್ನ ಪ್ರಾಣವನ್ನೇ ದೇಶಕ್ಕಾಗಿ ಮುಡುಪಾಗಿಟ್ಟ ಯೋಧನ ತ್ಯಾಗದ ಗುಣಗಾನ ಮಾಡಿದರು. ಯೋಧನ ಅಂತ್ಯಕ್ರಿಯೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಈ ಸಂದರ್ಭದಲ್ಲಿ ನೆರೆದ ಜನಸ್ತೋಮ ಪುಷ್ಪ ನಮನ ಸಲ್ಲಿಸಿ ಮತ್ತೆ ಹುಟ್ಟಿ ಬಾ ರಾಜಶೇಖರ ಎಂದು ಪ್ರಾರ್ಥನೆ ಸಲ್ಲಿಸಿದರು.