

ಬಾದಾಮಿ: ಹೃದಯಾಘಾತದಿಂದ ಮತಪಟ್ಟಿದ್ದ ಯೋಧ ತಾಲೂಕಿನ ನಂದಿಕೇಶ್ವರ ಗ್ರಾಮದ ಮಾಗುಂಡಯ್ಯ ಚನ್ನೃ ರೇಷ್ಮಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವ ಹಾಗೂ ಅಪಾರ ಜನರ ಕಂಬನಿ ಮಧ್ಯೆ ಗುರುವಾರ ನಡೆಯಿತು.
ಜೈಜವಾನ್, ಜೈ ಕಿಸಾನ್, ವಂದೇ ಮಾತರಂ, ಮಾಗುಂಡಯ್ಯ ಅಮರ ರಹೇ, ಅಮರ ರಹೇ ಎಂಬ ಘೋಷಣೆ ಮೊಳಗಿದವು.
ಮಾಗುಂಡಯ್ಯ ಅವರ ಪತ್ನಿ ಮತ್ತು ತಂದೆ- ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮದ ಜನತೆ ಕಂಬನಿ ಸುರಿಸಿದರು.
ರಾಜಸ್ಥಾನದಲ್ಲಿ ಎಲ್ಲ ಪ್ರಕ್ರಿಯೆ ಮುಗಿಸಿ ಅಲ್ಲಿಂದ ಬುಧವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ತರಲಾಯಿತು. ಬೆಳಗಾವಿಯಿಂದ ಗುರುವಾರ ಬೆಳಗ್ಗೆ ರಸ್ತೆ ಮೂಲಕ ನಂದಿಕೇಶ್ವರ ಗ್ರಾಮಕ್ಕೆ ಬರುತ್ತಿದ್ದಂತೆ ಜನರ ದುಃಖ ಇಮ್ಮಡಿಸಿತು. ಸಾರ್ವಜನಿಕರಿಗೆ ಗ್ರಾಮದ ಕಲ್ಯಾಣ ಮಂಟಪದ ವೇದಿಕೆ ಮುಂದಿನ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು, ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಜನತೆ ಅಂತಿಮ ನಮನ ಸಲ್ಲಿಸಿದರು.
ಗ್ರಾಮದ ಹೊಸ ಊರಿನಿಂದ ಹಳೇ ಊರಿನವರೆಗೂ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಸರ್ಕಾರ ಹಾಗೂ ಮಿಲಿಟರಿ ಗೌರವಗಳೊಂದಿಗೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ನಮನ ಸಲ್ಲಿಸಲಾಯಿತು. ಬಳಿಕ ಲಿಂಗಾಯತ ಸಂಪ್ರಾಯದಂತೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮಾಗುಂಡಯ್ಯನ ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನು ಪತ್ನಿ ಅಕ್ಷತಾ ಹಾಗೂ ಅವರ ತಂದೆ ಚನ್ನಯ್ಯ ಹಸ್ತಾಂತರಿಸಲಾಯಿತು. ಈ ವೇಳೆ ಕುಟುಂಬಸ್ತರ ದುಃಖದ ಕಟ್ಟೆ ಒಡೆಯಿತು.
ಯೋಧ ಮಾಗುಂಡಯ್ಯ ರೇಷ್ಮಿ ಅಂತ್ಯಕ್ರಿಯೆಗೂ ಶಿವಯೋಗಮಂದಿರ ಸಂಸ್ಥೆ ಉಪಾಧ್ಯಕ್ಷ ಸದಾಶಿವ ಮಹಾಸ್ವಾಮಿಗಳು, ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಮರಡಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ, ಮುನ್ನ ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಹನುಮಂತ ಮಾವಿನಮರದ ಎಸ್.ಟಿ. ಪಾಟೀಲ, ಮಹೇಶ ಹೊಸಗೌಡರ, ಪಿ.ಆರ್. ಗೌಡರ, ಮಧು ಯಡ್ರಾಮಿ, ರಾಜಮಹಮ್ಮದ ಬಾಗವಾನ, ತಹಸೀಲ್ದಾರ್ ಮಧುರಾಜ, ಎಂ.ಬಿ. ಹಂಗರಗಿ, ಮುಕ್ಕನಗೌಡ ಜನಾಲಿ, ಮಿಲಟರಿ ಅಧಿಕಾರಿ ಮಾಜಿ ಯೋಧರು ಅಂತಿಮ ನಮನ ಸಲ್ಲಿಸಿದರು.
ಗುರುವಾರ ಶಾಲೆಗಳಿಗೆ ರಜೆ ಘೋಷಿಸಿ ಅಗಲಿದ ಯೋಧನಿಗೆ ಗೌರವ ಸೂಚಿಸಲಾಯಿತು.
ದೇಶ ಸೇವೆಗಾಗಿ ದುಡಿಯುತ್ತಿದ್ದ ನನ್ನ ಮಗ ಭಾರತಾಂಬೆ ಮಡಿಲಲ್ಲಿ ಮರಣವನ್ನಪ್ಪಿದ್ದಾನೆ. ನನಗೆ ಹೆಮ್ಮೆ ಇದೆ. ನನ್ನ ಮಗನ ಸಾವಿನ ಸುದ್ದಿ ತಿಳಿದು ಒಂದು ಕಡೆ ನೋವುಂಟಾದರೆ, ಇನ್ನೊಂದೆಡೆ ಹೆಮ್ಮೆ ಇದೆ.
ಚನ್ನಯ್ಯ ರೇಷ್ಮಿ, ಮೃತ ಯೋಧನ ತಂದೆ.
ನನ್ನ ಪತಿ ಶತ್ರು ರಾಷ್ಟ್ರಗಳೊಂದಿಗೆ ಯುದ್ಧ ಮಾಡಿ ವೀರಮರಣ ಹೊಂದಿದ್ದರೆ ನನಗೆ ಇಷ್ಟು ನೋವಾಗುತ್ತಿರಲಿಲ್ಲ. ಆದರೆ ಬೆಳಗ್ಗೆ ರನ್ನಿಂಗ್ ಮುಗಿಸಿ ಮನೆಗೆ ವಾಪಾಸ್ ಬರುವಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದು ನನಗೆ ತಡೆದುಕೊಳ್ಳಲಾಗುತ್ತಿಲ್ಲ.
ಅಕ್ಷತಾ ರೇಷ್ಮಿ, ಮೃತ ಯೋಧನ ಪತ್ನಿ