ಎಸ್‌ಸಿ ಕಾಲನಿಗಳ ಅಭಿವೃದ್ಧಿಗೆ ಶೀಘ್ರವೇ ಅನುದಾನ: ಶಾಸಕ ಕೆ.ಹರೀಶ್‌ಗೌಡರ ಪ್ರಶ್ನೆಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉತ್ತರ

k-harishgowda
Published on

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪರಿಶಿಷ್ಟ ಜಾತಿಯ ಕಾಲನಿಗಳ ಅಭಿವೃದ್ಧಿಗೆ ಸರ್ಕಾರ ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಲಿದೆ.

ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಕೆ.ಹರೀಶ್‌ಗೌಡ ಅವರು ಚಾಮರಾಜ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿಯ ಕಾಲನಿಗಳ ಅಭಿವೃದ್ಧಿಗೆ ಹೊಸ ಕಾಮಗಾರಿಗಳಿಗಾಗಿ ಎಷ್ಟು ಅನುದಾನವನ್ನು ಎಸ್‌ಸಿಎಸ್‌ಪಿ ಯೋಜನೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರದ ಗಮನ ಸೆಳೆದರು.

‘ಜತೆಗೆ ಈ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಕಾಲನಿಗಳ ಅಭಿವೃದ್ಧಿಗಾಗಿ ಮುಂದುವರಿದ ಕಾಮಗಾರಿಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ? ಈ ಹೊಸ ಕಾಮಗಾರಿಗಳಿಗೆ ಅನುಮೋದನೆಯಾಗಿರುವ ಅನುದಾನವೆಷ್ಟು?’ ಎಂದು ಉತ್ತರ ನೀಡುವಂತೆ ಕೆ.ಹರೀಶ್‌ಗೌಡ ಸರ್ಕಾರಕ್ಕೆ ಪ್ರಶ್ನಿಸಿದ್ದರು.

‘2023-24ನೇ ಸಾಲಿನ ಪ್ರಗತಿ ಕಾಲನಿ ಯೋಜನೆಯಡಿ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸುವ ಅನುದಾನ ಲಭ್ಯತೆಯಾನ್ನಾಧರಿಸಿ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುತ್ತದೆ. 2023-24ನೇ ಸಾಲಿನ ಪ್ರಗತಿ ಕಾಲನಿ ಯೋಜನೆಯ ಅನುಷ್ಠಾನ ಸಂಬಂಧವಾಗಿ 125 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಆದೇಶ ಸಂ.ಆಇ 127 ಪ್ರಕಾರ ಅನುಮೋದನೆಯಾದ ಕಾಮಗಾರಿಗಳ ಕಾರ್ಯಭಾರವು 2023-24ನೇ ಸಾಲಿನ ಆಯವ್ಯಯದಲ್ಲಿ ಒದಗಿಸಿದ ಅನುದಾನಕ್ಕಿಂತ ಅಧಿಕವಾಗಿದ್ದಲ್ಲಿ, ಆಯವ್ಯಯದಲ್ಲಿನ ಅನುದಾನದಲ್ಲಿ ಕನಿಷ್ಠ ಶೇ.80 ರಷ್ಟು ಮೊತ್ತವನ್ನು ಮುಂದುವರಿದ ಕಾಮಗಾರಿಗಳಿಗೆ ಹಂಚಿಕೆ ಮಾಡಬಹುದು ಎಂದು ಆದೇಶಿಸಲಾಗಿದೆ. ಅದರನ್ವಯ ಹಂಚಿಕೆ ಮಾಡಲಾಗಿರುವ 125 ಕೋಟಿ ರೂ. ಪೈಕಿ ಶೇ.80 ರಷ್ಟು ಅನುದಾನವನ್ನು ಬಾಕಿ ಕಾರ್ಯಭಾರಕ್ಕೆ ಹಾಗೂ ಶೇ.20 ರಷ್ಟು ಅನುದಾನವನ್ನು ಹೊಸ ಕಾಮಗಾರಿಗಳಿಗೆ ಉಪ ಯೋಗಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸದನದಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net