ಜ.15ರಿಂದ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ

Mallikarjuna Rao
Published on

ಚಿಕ್ಕಮಗಳೂರು: ಸಮಸ್ತ ಹಿಂದೂ ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ಧನ ಸಂಗ್ರಹಣೆಗೆ ಸಂಕಲ್ಪ ಮಾಡಿರುವ ವಿಶ್ವ ಹಿಂದು ಪರಿಷದ್ ಜ.15 ರಿಂದ ಫೆ.5ರವರೆಗೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಸಲಿದ್ದು, ಜಿಲ್ಲೆಯ 1814 ಗ್ರಾಮಗಳ ಸುಮಾರು 2.25 ಲಕ್ಷ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ಅಭಿಮಾನ ಸಮಿತಿಯ ಜಿಲ್ಲಾ ಪ್ರಮುಖ ಬಿ.ಮಲ್ಲಿಕಾರ್ಜುನ ರಾವ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನದಲ್ಲಿ ರಾಜ್ಯಾದ್ಯಂತ 27,500 ಹಳ್ಳಿಗಳ ಸುಮಾರು 90 ಲಕ್ಷ ಭಕ್ತರನ್ನು ತಲುಪಿ ರಾಮಮಂದಿರಕ್ಕೆ ಧನ ಸಂಗ್ರಹಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಶ್ರೀ ರಾಮಜನ್ಮ ಭೂಮಿ ಟ್ರಸ್ಟ್ ನ ವಿಶ್ವಸ್ಥರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು.

ಆದಾಯ ತೆರಿಗೆ ವಿನಾಯ್ತಿ:
10 ರೂ.ನಿಂದ 100 ಹಾಗೂ 1000 ರೂ.ವರೆಗೆ ಮುದ್ರಿತ ಕೂಪನ್‍ಗಳ ಮೂಲಕ ಧನಸಂಗ್ರಹ ನಡೆಯಲಿದ್ದು, 2,000 ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ್ದ ಭಕ್ತರಿಗೆ ರಸೀದಿ ನೀಡಲಾಗುವುದು. ಈ ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯ 80ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯ್ತಿಯ ಸೌಲಭ್ಯ ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು.

48 ಗಂಟೆಗಳಲ್ಲಿ ಬ್ಯಾಂಕ್ ಖಾತೆಗೆ ಜಮೆ:
5 ಕಾರ್ಯಕರ್ತೆರನ್ನು ಒಳಗೊಂಡ ತಂಡ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದು, ಸಂಗ್ರಹವಾದ ಹಣವನ್ನು 48 ಗಂಟೆಯೊಳಗೆ ತೀರ್ಥಕ್ಷೇತ್ರ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ತಂಡದಲ್ಲಿ ಸಂಗ್ರಹವಾಗುವ ಹಣವನ್ನು ಜಮೆ ಮಾಡುವ ಕಾರ್ಯಕರ್ತರಿಗೆ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಬ್ಯಾಂಕ್ ಆಫ್ ಬರೋಡಾ ಇಲ್ಲವೆ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಲ್ಲಿ ನೋಂದಣಿ ಸಂಖ್ಯೆ ನೀಡಲಾಗಿದ್ದು, ಹಣ ಪಾವತಿ ವ್ಯವಸ್ಥೆಯು ಸಂಪೂರ್ಣ ಪಾರದರ್ಶಕವಾಗಿರಲಿದೆ ಎಂದು ತಿಳಿಸಿದರು.

ಅಭಿಯಾನದ ಸಾಕ್ಷ್ಯಚಿತ್ರ ರಚನೆ: 
ಚಿತ್ರರಂಗದ ಡಾ.ಚಂದ್ರಪ್ರಕಾಶ್ ದ್ವಿವೇದಿ ರಾಮಮಂದಿರದ ಇತಿಹಾಸ ಹಾಗೂ ಈ ಅಭಿಯಾನದ ಸಾಕ್ಷ್ಯಚಿತ್ರವನ್ನು ರಚಿಸಿದ್ದು, ಸಿನಿಮಾ ನಟ ಅಕ್ಷಯ್‍ಕುಮಾರ್ ಅವರ ಅಭಿಯಾನ ಕುರಿತ ನಿವೇದನೆ ಒಳಗೊಂಡಿರುತ್ತದೆ. ದೇಶದ ಮೂಲೆ ಮೂಲೆಗಳಿಗೂ ಅಭಿಯಾನದ ಮಾಹಿತಿಯನ್ನು ಶ್ರಾವ್ಯ ಹಾಗೂ ದೃಶ್ಯ ಮಾಧ್ಯಮದ ಮೂಲಕ ತಲುಪಿಸಲಾಗುವುದು ಎಂದರು.

ಈ ಅಭಿಯಾನ ಹಾಗೂ ಮಂದಿರ ನಿರ್ಮಾಣ ಕಾರ್ಯವೆಂದರೆ ಇದು ಜಾಗೃತ ಹಿಂದೂ ಶಕ್ತಿಯ ಸಂಕೇತ. ಸಮಾಜವನ್ನು ಮೇಲು-ಕೀಳು ಎಂಬ ಭಾವನೆಗಳಿಂದ ಮುಕ್ತಗೊಳಿಸುವ ಬಡತನ, ಆರೋಗ್ಯ, ಶಿಕ್ಷಣ, ಕೌಶಲ್ಯದ ನ್ಯೂನತೆಗಳನ್ನು ನಿರ್ಮೂಲನೆ ಮಾಡುವ, ಮಹಿಳೆಯರ ಘನತೆ ಮರು ಸ್ಥಾಪಿಸುವ, ಭಯೋತ್ಪಾದನೆ ನಿರ್ಮೂಲನೆ ಮಾಡುವ ವೇದದ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಹೀಗಿರಲಿದೆ ರಾಮ ಮಂದಿರ:
2024ರೊಳಗೆ ಶ್ರೀ ರಾಮಮಂದಿರದ ಗರ್ಭಗುಡಿಯಲ್ಲಿ ಶ್ರೀ ರಾಮಲಲ್ಲಾನ ಪ್ರತಿಷ್ಠಾಪನೆಯಾಗಿ ದೇವರ ದರ್ಶನದ ವ್ಯವಸ್ಥೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಂಪೂರ್ಣ ಕಲ್ಲಿನ ಬ್ಲಾಕ್‍ಗಳ ನೆರವಿನಲ್ಲಿ 2.7 ಎಕರೆ ವಿಸ್ತೀರ್ಣದ 54 ಸಾವಿರ ಚದರ ಅಡಿಯ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಈ ಮಂದಿರ 360 ಅಡಿ ಉದ್ದ ಹಾಗೂ 235 ಅಗಲದಲ್ಲಿರಲಿದ್ದು, ಮೂರು ಅಂತಸ್ತು ಹಾಗೂ 5 ಮಂಟಪ ಹೊಂದಿರುತ್ತವೆ. ನೆಲ ಮಾಳಿಗೆಯಲ್ಲಿ 160, ಮೊದಲನೆಯ ಮಹಡಿಯಲ್ಲಿ 132 ಹಾಗೂ ಎರಡನೇಯ ಮಹಡಿಯಲ್ಲಿ 74 ಕಂಬಗಳಿರಲಿವೆ ಎಂದು ತಿಳಿಸಿದರು.

ಏನೇನಿರಲಿವೆ?:
ಅಂತಾರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ದಾಖಲಾತಿಗಳ ಭಂಡಾರ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಯಜ್ಞಶಾಲೆ, ವೇದ ಪಾಠಶಾಲೆ, ಸತ್ಸಂಗ ಭವನ, ಪ್ರಸಾದ ವಿನಿಯೋಗ ಸ್ಥಳ, ಆಂಪಿ ಥಿಯೇಟರ್, ಧರ್ಮಶಾಲೆ, ಪ್ರದರ್ಶನಾಲಯ, ಸೇರಿದಂತೆ ಹಲವು ಸೌಲಭ್ಯಗಳು ಮಂದಿರದ ಆವರಣದಲ್ಲಿ ನಿರ್ಮಾಣವಾಗಲಿದೆ ಎಂದರು.

ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಆರ್‍ಎಸ್‍ಎಸ್‍ನ ಸಂಪರ್ಕ ಪ್ರಮುಖ್ ಪ್ರಸನ್ನಕುಮಾರ್ ಕಿಬ್ಳಿ, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net