

ಯಲ್ಲಾಪುರ: ತಾಲೂಕಿನಲ್ಲಿ ಕಳೆದ 2021ರ ಪ್ರವಾಹದಲ್ಲಿ ಹಾನಿ ಉಂಟಾದ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರದಿಂದ ಮಂಜೂರಾದ ಅನುದಾನದ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ತಾಂತ್ರಿಕ ವಿಭಾಗದ ಅಧಿಕಾರಿಗಳು ತನಿಖೆಗಾಗಿ ಏ. 7ರಂದು ಯಲ್ಲಾಪುರಕ್ಕೆ ಆಗಮಿಸಲಿದ್ದಾರೆ.
ಅತಿವೃಷ್ಟಿ ಉಂಟಾದಾಗ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಕಳಚೆ ಹೊರತುಪಡಿಸಿ, ತಾಲೂಕಿನ ಉಳಿದ 14 ಗ್ರಾ.ಪಂ.ಗಳಲ್ಲಿ ಯಾವುದೇ ಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದರು. ಹಾನಿಗೆ 15 ಕೋಟಿ ರೂ. ಪರಿಹಾರ ಕಳಚೆ ಗ್ರಾಮಕ್ಕೆಂದು ಬಂದಿದ್ದು, ಅದನ್ನು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಅಧಿಕಾರಿಗಳು ಹಂಚಿಕೆ ಮಾಡಿದ್ದಾರೆ.
ಕೆಲವೆಡೆ ಕಾಮಗಾರಿ ಮುಗಿಯುವ ಮುನ್ನವೇ ಬಿಲ್ ಮಾಡಲಾಗಿದೆ. ಕಾಮಗಾರಿಯ ದಾಖಲೆಗಳನ್ನು ಸಮರ್ಪಕವಾಗಿ ನೀಡಿಲ್ಲ. ಅಧಿಕಾರಿಗಳು ತಮ್ಮ ಆಪ್ತ ಗುತ್ತಿಗೆದಾರರನ್ನು ಈ ಅವ್ಯವಹಾರದಲ್ಲಿ ಬಳಸಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಧೀರಜ ತಿನೆಕರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಶಿರಸಿ ಜಿ.ಪಂ ಉಪವಿಭಾಗದ ಎಇ, ಯಲ್ಲಾಪುರದ ಎಇಇ, ಸಹಾಯಕ ಇಂಜನಿಯರ್, ತಾ.ಪಂ ಇಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ತನಿಖೆ ಆರಂಭಿಸಿರುವ ಅಧಿಕಾರಿಗಳು ಕಾಮಗಾರಿಗಳ ಸ್ಥಳ ಪರಿಶೀಲನೆಗಾಗಿ ತಾಲೂಕಿಗೆ ಬರುತ್ತಿದ್ದಾರೆ. ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ ಅಧಿಕಾರಿಗಳು ಬಂದಾಗ, ಅವ್ಯವಹಾರದ ಬಗೆಗೆ ಗ್ರಾಮಸ್ಥರು ಹಾಜರಿದ್ದು ಮಾಹಿತಿ ನೀಡಬೇಕೆಂದು ತಿನೆಕರ್ ಪತ್ರಿಕಾ ಹೇಳಿಕೆಯ ಮೂಲಕ ವಿನಂತಿಸಿದ್ದಾರೆ.