ಪೂರ್ಣ ಪ್ರಮಾಣದಲ್ಲಿ ಸೇವೆ ಆರಂಭ

IMG-20230920-WA0048
Published on

ನಗರದ ಮೊದಲ ಹಾಗೂ ಬಹು ನಿರೀಕ್ಷಿತ ಸೂಪರ್ ಸ್ಪೆಷಾಲಿಟಿ ಹಾಗೂ ಟ್ರಾಮಾ ಕೇರ್ ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಸೇವೆ ಆರಂಭಿಸಿದ್ದು, ಮೈಸೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ರೋಗಿಗಳಿಗೆ ನೆರವಾಗಿವೆ. ಬಿಪಿಎಲ್ ಕಾರ್ಡುದಾರರು ಉಚಿತವಾಗಿ ಸೂಪರ್ ಸ್ಪೆಷಾಲಿಟಿ ವಿಭಾಗದ ಸರ್ಜರಿ ಸೇವೆಗಳನ್ನು ಪಡೆಯಬಹುದಾಗಿದೆ.

ನಗರದ ಕೆಆರ್‌ಎಸ್ ರಸ್ತೆಯಲ್ಲಿ ಅತ್ಯುಪಯುಕ್ತ ಸೇವೆ ನೀಡುವ 115 ಹಾಸಿಗೆಯ ಟ್ರಾಮಾ ಕೇರ್ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಒಂದು ಸಣ್ಣ ಮೂಳೆ ಮುರಿತಕ್ಕೂ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ವ್ಯಯಿಸಬೇಕಾದ ಚಿಕಿತ್ಸೆ ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತವಾಗಿ ಹಾಗೂ ಬಿಪಿಎಲ್ ಇಲ್ಲದವರಿಗೆ 10 ರಿಂದ 15 ಸಾವಿರ ರೂ.ಗಳಲ್ಲಿ ಪಡೆಯಬಹುದಾಗಿದೆ. ಟ್ರಾಮಾ ಕೇರ್ ಆಸ್ಪತ್ರೆಯಲ್ಲಿ ಮೂರು ಬಗೆಯ ಐಸಿಯು ಸೇವೆ, ತಲೆಗೆ ಆದ ಗಾಯ, ಮೂಳೆ ಮುರಿತ, ರಕ್ತ ಹೆಪ್ಪುಗಟ್ಟಿರುವುದು, ನ್ಯೂರೋ ಸರ್ಜಿರಿಯಂತಹ ಚಿಕಿತ್ಸೆ ದೊರೆಯುತ್ತವೆ.

‘ಬಿಪಿಎಲ್ ಕಾರ್ಡ್ ಇಲ್ಲದವರೂ ಖಾಸಗಿ ಆಸ್ಪತ್ರೆಗಿಂತ ಶೇ. 25 ರಿಂದ 30ರಷ್ಟು ಕಡಿಮೆ ಹಣ ವ್ಯಯಿಸಿ ಸೂಪರ್ ಸ್ಪೆಷಾಲಿಟಿ ಸೇವೆಯಡಿ ಸರ್ಜರಿ ಮಾಡಿಸಿಕೊಳ್ಳಬಹುದು. ಮಾತ್ರವಲ್ಲದೆ, ಅಪಘಾತದಂತಹ ಸಂದರ್ಭಗಳಲ್ಲಿ ಆದ ಸಣ್ಣ ಪ್ರಮಾಣದ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗಳಲ್ಲಿ 60,000 ದಿಂದ 1.5 ಲಕ್ಷ ರೂ. ವರೆಗೆ ವ್ಯಯಿಸಬೇಕಾಗುತ್ತದೆ. ಈ ಮಾದರಿಯ ಸರ್ಜರಿಯನ್ನು ಸರ್ಕಾರಿ ಟ್ರಾಮಾ ಕೇರ್ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಮಾಡಲಾಗುತ್ತದೆ. ಈ ಎಲ್ಲ ಸೇವೆಗಳನ್ನು ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಹಾಗೂ ಟ್ರಾಮಾ ಕೇರ್ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗಿದೆ ಎಂದು ಮೈಸೂರು ಮೆಡಿಕಲ್ ಕಾಲೇಜು ಡೀನ್ ಆ್ಯಂಡ್ ಡೈರೆಕ್ಟರ್ ಡಾ.ಕೆ.ಆರ್. ದಾಕ್ಷಾಯಿಣಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಈವರೆಗೆ ಸೂಪರ್ ಸ್ಪೆಷಾಲಿಟಿ ಹಾಗೂ ಟ್ರಾಮಾ ಕೇರ್ ಆಸ್ಪತ್ರೆಯ ಸೇವೆಗಳನ್ನು ಒಟ್ಟಾಗಿಯೇ ನೀಡಲಾಗುತ್ತಿತ್ತು. ಇದೀಗ ಕೆಲ ಅಗತ್ಯತೆಗಳು ಪೂರೈಕೆಯಾಗಿರುವುದರಿಂದ ಮೂಲ ಉದ್ದೇಶದಂತೆ ಈ ಎರಡೂ ಸೇವೆಗಳನ್ನು ಕೆಆರ್‌ಎಸ್ ರಸ್ತೆಯ ಆಯಾ ಆಸ್ಪತ್ರೆಯ ಕಟ್ಟಡಗಳಲ್ಲಿ ಪ್ರತ್ಯೆಕವಾಗಿ ಆರಂಭಿಸಲಾಗಿದೆ.

ಸದ್ಯ ಈ ಆಸ್ಪತ್ರೆಗಳಿಗೆ ಬೇಕಾದ ನರ್ಸಿಂಗ್, ಡಿ ಗ್ರೂಪ್ ಸಿಬ್ಬಂದಿಯನ್ನು ಒದಗಿಸಲಾಗಿದೆ. ಮಾತ್ರವಲ್ಲದೆ, ಮತ್ತಷ್ಟು ಸುಸಜ್ಜಿತ ಯಂತ್ರೊಪಕರಣಗಳು ಬೇಕಿವೆ. ಅದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಸರ್ಕಾರ ಸೌಲಭ್ಯ ಒದಗಿಸಿಕೊಡಲಿದೆ. ಮುಂದಿನ ದಿನಗಳಲ್ಲಿ ಮತಷ್ಟು ಸುಸಜ್ಜಿತ ಸೇವೆ ಈ ಆಸ್ಪತ್ರೆಗಳಿಂದ ದೊರೆಯಲಿದೆ.

ಸೂಪರ್ ಸ್ಪೆಷಾಲಿಟಿ ಯಾವುದು?
ಯೂರಾಲಜಿ, ನೆಫ್ರಾಲಜಿ, ಆಂಕಾಲಜಿ, ಸರ್ಜಿಕಲ್ ಆಂಕಾಲಜಿ, ಮೆಡಿಕಲ್ ಗ್ಯಾಸ್ಟ್ರೊ ಎಂಟ್ರಾಲಜಿ, ಸರ್ಜಿಕಲ್ ಗ್ಯಾಸ್ಟ್ರೊ ಎಂಟ್ರಾಲಜಿ, ಪ್ಲಾಸ್ಟಿಕ್ ಸರ್ಜರಿ, ಇಎನ್‌ಟಿ ಕಾಕ್ಲಿಯಾರ್ ಇಂಪ್ಲಾಂಟ್ ಸರ್ಜರಿ, ಕಾರ್ಡಿಯೊ ಥೊರಾಕ್ಸ್ ಸರ್ಜರಿ, ಎಂಡೊ ಕ್ರೊನಾಲಜಿ, ನ್ಯೂರೊ ಸರ್ಜರಿ, ನ್ಯೂರಾಲಜಿ ಸೇರಿದಂತೆ ಒಟ್ಟು 12 ಸೂಪರ್ ಸ್ಪೆಷಾಲಿಟಿ ಸೇವೆ ಆರಂಭವಾಗಿವೆ. ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಎಂದಿನಂತೆ ಬ್ರಾಡ್ ಸ್ಪೆಷಾಲಿಟಿ (ಜನರಲ್ ಸರ್ಜರಿ, ಜನರಲ್ ಮೆಡಿಸಿನ್, ಇಎನ್‌ಟಿ, ನೇತ್ರಶಾಸ್ತ್ರ , ಚರ್ಮರೋಗ, ಮನೋವಿಜ್ಞಾನ ಹಾಗೂ ಇತರ ವಿಭಾಗ) ಸೇವೆಗಳು ದೊರೆಯುತ್ತಿವೆ.

ಜೀವ ಉಳಿಸಲಿದೆ ಟ್ರಾಮಾ ಕೇರ್
ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ತಲೆಗೆ ಆಗುವ ಗಾಯದಿಂದ ಸಂಭವಿಸುವ ಪ್ರಾಣಾಪಾಯವನ್ನು ತಪ್ಪಿಸುವುದು ಹಾಗೂ ಚಿಕಿತ್ಸೆಯ ವಿಳಂಬದ ಕಾರಣಕ್ಕೆ ಅಂಗವಿಕಲರಾಗುವುದನ್ನು ತಪ್ಪಿಸುವುದು ಟ್ರಾಮಾ ಕೇರ್ ಸೇವೆಯ ಮೂಲ ಉದ್ದೇಶವಾಗಿದೆ. ಮೈಸೂರು ಮೆಡಿಕಲ್ ಕಾಲೇಜಿನ ಮೂರು ಆಸ್ಪತ್ರೆಗಳಿಂದ ವರ್ಷಕ್ಕೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಅಂದಾಜು 40 ಕೋಟಿ ರೂ. ಕ್ಲೈಮ್ ಮಾಡಲಾಗುತ್ತಿದೆ. ತನ್ಮೂಲಕ ಇಷ್ಟು ಪ್ರಮಾಣದ ಆರೋಗ್ಯ ಸೇವೆಯನ್ನು ಬಡವರಿಗೆ ಉಚಿತವಾಗಿ ತಲುಪಿಸಲಾಗುತ್ತಿದೆ.
ಕಳೆದ ಫೆ. 6ರಿಂದ ಇಲ್ಲಿಯವರೆಗೆ 27,443 ರೋಗಿಗಳು ಟ್ರಾಮಾ ಕೇರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉಪಯೋಗ ಪಡೆದುಕೊಂಡಿದ್ದಾರೆ. ಟ್ರಾಮಾ ಕೇರ್‌ನಲ್ಲಿ ಕಳೆದ ನಾಲ್ಕು ತಿಂಗಳಿಂದ 1,682 ಒಳ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 3,301 ರೋಗಿಗಳು ಎಕ್ಸರೇ ಸೌಲಭ್ಯ ಪಡೆದಿದ್ದಾರೆ.

ಸೂಪರ್ ಸ್ಪೆಷಾಲಿಟಿ ಹಾಗೂ ಟ್ರಾಮಾ ಕೇರ್ ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಸೇವೆ ಆರಂಭಿಸಿದ್ದು, ಮೈಸೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ರೋಗಿಗಳಿಗೆ ನೆರವಾಗಿವೆ. ಈವರೆಗೆ ಸೂಪರ್ ಸ್ಪೆಷಾಲಿಟಿ ಹಾಗೂ ಟ್ರಾಮಾ ಕೇರ್ ಆಸ್ಪತ್ರೆಯ ಸೇವೆಗಳನ್ನು ಒಟ್ಟಾಗಿಯೇ ನೀಡಲಾಗುತ್ತಿತ್ತು. ಇದೀಗ ಕೆಲ ಅಗತ್ಯತೆಗಳು ಪೂರೈಕೆಯಾಗಿರುವುದರಿಂದ ಮೂಲ ಉದ್ದೇಶದಂತೆ ಈ ಎರಡೂ ಸೇವೆಗಳನ್ನು ಕೆಆರ್‌ಎಸ್ ರಸ್ತೆಯ ಆಯಾ ಆಸ್ಪತ್ರೆಯ ಕಟ್ಟಡಗಳಲ್ಲಿ ಪ್ರತ್ಯೆಕವಾಗಿ ಆರಂಭಿಸಲಾಗಿದೆ.ಡಾ.ಕೆ.ಆರ್. ದಾಕ್ಷಾಯಿಣಿ, ಎಂಎಂಸಿ ಡೀನ್ ಆ್ಯಂಡ್ ಡೈರೆಕ್ಟರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net