

ಮೈಸೂರು: ದಸರಾ ಗಜಪಡೆಯ ಪೂರ್ಣ ಪ್ರಮಾಣ ತಾಲೀಮು ರಂಗೇರಿದೆ. ಈ ಅಭ್ಯಾಸ ನೋಡುವುದೇ ಕಣ್ಣಿಗೆ ಹಬ್ಬದಂತಾಗಿದೆ.
ಪ್ರಸಕ್ತ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು 14 ಆನೆಯನ್ನು ಆಯ್ಕೆ ಮಾಡಲಾಗಿದ್ದು, ಎರಡು ತಂಡಗಳಲ್ಲಿ ಆಗಮಿಸಿ ಈಗಾಗಲೇ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಆನೆಗಳ ಪೂರ್ಣ ಪ್ರಮಾಣದ ತಾಲೀಮು ಗುರುವಾರದಿಂದಲೇ ಶುರುವಾಗಿದೆ.
ಗಜಪಡೆಗೆ 2ನೇ ತಂಡದ ಆನೆಗಳು ಸೇರ್ಪಡೆಗೊಂಡಿದ್ದರಿಂದ ಅರಮನೆಯಿಂದ ಜಂಬೂಸವಾರಿ ಮಾರ್ಗದಲ್ಲಿ ದಸರಾ ಆನೆಗಳು ನಡೆಸುವ ತಾಲೀಮು ಕಳೆಕಟ್ಟಿದೆ. ಈಗಾಗಲೇ 2ನೇ ಹಂತದ ತಾಲೀಮು ಆರಂಭಿಸಲಾಗಿದ್ದು, ಈ ವಾರದಲ್ಲಿ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತದೆ.
ಶುಕ್ರವಾರ ಬೆಳಗ್ಗೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಭೀಮ, ಏಕಲವ್ಯ, ಲಕ್ಷ್ಮೀ, ರೋಹಿತ್, ಗೋಪಿ, ಧನಂಜಯ, ಸುಗ್ರೀವ, ಮಹೇಂದ್ರ, ಪ್ರಶಾಂತ, ದೊಡ್ಡಹರವೆ ಶಿಬಿರದ ಲಕ್ಷ್ಮೀ ಹಾಗೂ ಹಿರಣ್ಯ ಆನೆಗಳು ತಾಲೀಮಿನಲ್ಲಿ ಹೆಜ್ಜೆ ಹಾಕಿದವು.
ಅರಮನೆಯ ಬಲರಾಮ ದ್ವಾರದಿಂದ ಹೊರಬಂದ ಆನೆಗಳು ಚಾಮರಾಜ ವೃತ್ತ, ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆಯಲ್ಲಿ ಸಾಗಿದವು. ಇಲ್ಲಿಯವರೆಗೂ 14 ಆನೆಗಳು ಸಾಲಾಗಿ ಹೆಜ್ಜೆ ಹಾಕಿದವು.
ತೂಕ ಪರೀಕ್ಷೆಗಾಗಿ ಧನ್ವಂತ್ರಿ ರಸ್ತೆಗೆ ಎರಡನೇ ತಂಡ 5 ಆನೆಗಳು ತಿರುವು ಪಡೆದರೆ, ಉಳಿದ 7 ಆನೆಗಳು ಸರ್ಕಾರಿ ಆಯುರ್ವೇದ ಆಸ್ಪತ್ರೆ ಮೂಲಕ ಹಳೇ ಆರ್‌ಎಂಸಿ ವೃತ್ತದವರೆಗೂ ಸಾಗಿದವು. ಬಳಿಕ ಕೆಲ ಸಮಯ ವಿಶ್ರಾಂತಿ ಪಡೆದ ಬಳಿಕ ಆರ್‌ಎಂಸಿ ವೃತ್ತದಿಂದ ಅರಮನೆಯತ್ತ ವಾಪಸ್ ಆದವು
ಅಷ್ಟರಲ್ಲಾಗಲೇ ತೂಕ ಪರೀಕ್ಷೆ ಬಳಿ 2ನೇ ತಂಡದ 5 ಆನೆಗಳು ಜೆ.ಕೆ.ಮೈದಾನದ ಕಡೆಯಿಂದ ಇರ್ವಿನ್ ರಸ್ತೆ ಮೂಲಕ ಕೆ.ಆರ್.ಆಸ್ಪತ್ರೆ ಮುಂಭಾಗ ತಲುಪಿದ್ದವು. ಬಳಿಕ ಮೊದಲ ತಂಡದ ಆನೆಯೊಂದಿಗೆ ನೇ ತಂಡದ ಆನೆಗಳು ಸೇರಿ ಸಯ್ಯಜಿರಾವ್ ರಸ್ತೆ, ಕೆ.ಆರ್.ವೃತ್ತದ ಮೂಲಕ ಅರಮನೆಗೆ ಬಂದವು.
14 ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದರಿಂದ ಆನೆಗಳ ಸಾಲು ಬಲು ಉದ್ದವಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಾಹನ ಸವಾರರು ಆನೆಗಳನ್ನು ಕಂಡು ಸಂಭ್ರಮಿಸಿದರು. ಅಲ್ಲದೆ, ಮೊಬೈಲ್‌ಗಳಲ್ಲಿ ಫೋಟೋ, ವಿಡಿಯೋ ತೆಗೆದುಕೊಂಡರು.