ವಿಆರ್​ಡಿಎಲ್ ಆಗಸ್ಟ್​ನಲ್ಲಿ ಪೂರ್ಣ

5SIRSI2- PRAYOGALAYA
Published on

ಶಿರಸಿ: ನಗರದಲ್ಲಿ ಆರ್​ಟಿಪಿಸಿಆರ್ ಯಂತ್ರವನ್ನೊಳಗೊಂಡ ಕರೊನಾ ಸೋಂಕು ಪತ್ತೆ ಪ್ರಯೋಗಾಲಯ(ವಿಆರ್​ಡಿಎಲ್) ಕಾಮಗಾರಿ ಭರದಿಂದ ಸಾಗಿದ್ದು, ಆಗಸ್ಟ್ ಅಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ ನಿರ್ವಣಗೊಂಡ ತಾಯಿ ಮಕ್ಕಳ ಆಸ್ಪತ್ರೆ ಹಿಂಬದಿಯ ಕಟ್ಟಡದಲ್ಲಿ ಪ್ರಯೋಗಾಲಯ ಸ್ಥಾಪನೆ ಕೆಲಸ ಚುರುಕು ಪಡೆದುಕೊಂಡಿದೆ. ಜೂ. 4ರಂದು ಪ್ರಯೋಗಾಲಯ ಸ್ಥಾಪನೆಗೆ ಲಿಖಿತ ಸಮ್ಮತಿ ಲಭಿಸಿತ್ತು. ಇದೀಗ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಕರೊನಾ ಎರಡನೇ ಅಲೆ ಮುಕ್ತಾಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

12 ತಾಲೂಕುಗಳಿರುವ ಜಿಲ್ಲೆಯಲ್ಲಿ ಕಾರವಾರದ ಕ್ರಿಮ್್ಸ ಸಂಸ್ಥೆಯ ಪ್ರಯೋಗಾಲಯದ ಮೂಲಕ ಮಾತ್ರ ಕೋವಿಡ್ ಪತ್ತೆ ನಡೆಸಲಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಅಂದಾಜು 4,40,097 ಗಂಟಲು ದ್ರವ ಪರೀಕ್ಷೆ ಅಲ್ಲಿ ನಡೆಸಲಾಗಿದೆ. ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಸರಾಸರಿ ಎರಡು ಸಾವಿರ ಪರೀಕ್ಷೆ ಅಲ್ಲಿ ನಡೆದಿದೆ. ಕಳೆದ ತಿಂಗಳಲ್ಲಿ ದಿನದ ಸರಾಸರಿ ಪ್ರಮಾಣ ಮೂರು ಸಾವಿರ ದಾಟಿತ್ತು. ಮೇ ಆರಂಭದಿಂದ ಜೂನ್ ಮಧ್ಯಂತರದವರೆಗೆ ಜಿಲ್ಲೆಯಲ್ಲಿ ಸಾವಿರಾರು ಕೋವಿಡ್ ಪ್ರಕರಣ ದಾಖಲಾಗಿದ್ದವು. ದೇಶದಲ್ಲೇ ಹೆಚ್ಚು ಪಾಸಿಟಿವಿಟಿ ದರ ದಾಖಲಾಗಿತ್ತು. ಪ್ರತಿ ತಾಲೂಕಿನಿಂದ ದಿನಕ್ಕೆ ಸಾವಿರಕ್ಕೂ ಹೆಚ್ಚು ಗಂಟಲದ್ರವ ರವಾನೆಯಾಗುತ್ತಿತ್ತು. ಆದರೆ, ಸೀಮಿತ ಸಂಖ್ಯೆಯ ಮಾದರಿಗಳನ್ನು ಮಾತ್ರ ಪರೀಕ್ಷೆಗೆ ಒಳಪಡಿಸಬೇಕಿತ್ತು. ಶಿರಸಿ, ಸಿದ್ದಾಪುರ, ಮುಂಡಗೋಡ ಭಾಗದಿಂದ ಸಂಗ್ರಹಿಸಲಾದ ಗಂಟಲದ್ರವ ಮಾದರಿಯನ್ನು ಕಾರವಾರಕ್ಕೆ ಕಳುಹಿಸಲು ಐದಾರು ತಾಸು ಬೇಕಾಗುತ್ತಿತ್ತು. ಜಿಲ್ಲೆಗೆ ಒಂದೇ ಪ್ರಯೋಗಾಲಯ ಇದ್ದುದರಿಂದ ಒತ್ತಡ ಅಧಿಕವಾಗಿ ವರದಿ ಬರುವುದು ವಿಳಂಬವಾಗಿ ಸಮಸ್ಯೆಗೆ ಕಾರಣವಾಗಿತ್ತು ಎನ್ನುತ್ತಾರೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು.

ಜಿಲ್ಲೆಗೆ ಹೆಚ್ಚುವರಿ ಪ್ರಯೋಗಾಲಯ ಸ್ಥಾಪನೆಗೆ ಕ್ರಮಕೈಗೊಳ್ಳುವಂತೆ ಏಪ್ರಿಲ್​ನಲ್ಲಿ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿತ್ತು. ಜೂನ್ ಆರಂಭಕ್ಕೆ ಸ್ಥಾಪನೆ ಆದೇಶ ಸಿಕ್ಕಿದ್ದು, ವೇಗವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಅತಿ ಶೀಘ್ರದಲ್ಲಿ ಪ್ರಯೋಗಾಲಯ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.| ಶಿವರಾಮ ಹೆಬ್ಬಾರ ಜಿಲ್ಲಾ ಉಸ್ತುವಾರಿ ಸಚಿವಕೋವಿಡ್ ಪತ್ತೆ ಪ್ರಯೋಗಾಲಯಕ್ಕೆ ಆರ್​ಟಿಪಿಸಿಆರ್ ಯಂತ್ರ ಹಾಗೂ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಪ್ರಯೋಗಾಲಯದ ಒಳಾಂಗಣದಲ್ಲಿ ಕಂಪಾರ್ಟ್​ವೆುಂಟ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಪ್ರಯೋಗಾಲಯದಲ್ಲಿ ಕೆಲಸ ಮಾಡಲು ನುರಿತ ಮೈಕ್ರೊ ಬಯಾಲಾಜಿಸ್ಟ್, ತಂತ್ರಜ್ಞರು, ಸಿಬ್ಬಂದಿ ಬೇಕು. ಅವರು ನಿತ್ಯ ಮೂರು ಪಾಳಿಯಲ್ಲೂ ಕೆಲಸ ನಿರ್ವಹಿಸುವ ಸಾಮರ್ಥ್ಯವುಳ್ಳವರಾಗಿರಬೇಕು. ಅಂಥವರನ್ನು ನೇಮಿಸುವುದೇ ಸವಾಲು.| ಹೆಸರು ಹೇಳಲಿಚ್ಛಿಸದ ಆರೋಗ್ಯ ಇಲಾಖೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net