

ಅರಸೀಕೆರೆ ಗ್ರಾಮಾಂತರ : ತಾಲೂಕಿನ ಸುಕ್ಷೇತ್ರ ಯಾದಾಪುರ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಶನಿವಾರ ನೋಲ್ ಹುಣ್ಣಿಮೆ ಸಂಭ್ರಮ ಕಳೆಗಟ್ಟಿತ್ತು. ಹುಣ್ಣಿಮೆ ಅಂಗವಾಗಿ ಬೆಟ್ಟದ ಮೇಲಿರುವ ಸಿದ್ದೇಶ್ವರಸ್ವಾಮಿ ಪಾದಗಳಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ನೂರೊಂದೆಡೆ ಸೇವೆ ನೆರವೇರಿಸಲಾಯಿತು. ಬಗೆಬಗೆಯ ಹೂಗಳಿಂದ ಅಲಂಕಾರ ಮಾಡಿ ಪಾದಗಳನ್ನು ಪೂಜಿಸಿ ಮಹಾಮಂಗಳಾರತಿ ಮಾಡಿ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ತಂಡೋಪತಂಡವಾಗಿ ಬಂದಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ಬೆಟ್ಟ ಹತ್ತಿ ಪಾದಗಳ ದರ್ಶನ ಪಡೆದರು. ಗ್ರಾಮದ ಮಧ್ಯಭಾಗದಲ್ಲಿರುವ ಮೂಲಸ್ಥಾನದಲ್ಲಿರುವ ದೇಗುಲದಲ್ಲಿ ಬಸವೇಶ್ವರ ಸ್ವಾಮಿ ಹಾಗೂ ಕೆಂಚಮ್ಮ ದೇವಿಗೂ ವಿಶೇಷ ಅಲಂಕಾರ ಮಾಡಿದ್ದು, ಭಕ್ತ ಸಾಗರವೇ ಹರಿದುಬಂದಿತ್ತು. ದೇವಾಲಯ ಸಮಿತಿ ವತಿಯಿಂದ ಪರ ಸೇವೆ ನಡೆಯಿತು. ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಿದ್ದರೆ, ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಸುಕ್ಷೇತ್ರ ಯಾದಪುರ ಜಾತ್ರಾ ವಾತಾವರಣವಾಗಿತ್ತು.