ಸಂತ್ರಸ್ತರ ಸಮಸ್ಯೆ ಈಡೇರಿಕೆಗೆ ಪೂರ್ಣ ಸಹಕಾರ

Full cooperation to solve the problem of victims
ಬೀಳಗಿ ತಾಲೂಕಿನ ಅಮಲಝರಿಯಲ್ಲಿ ನಡೆದ ಮುಳುಗಡೆ ಸಂತ್ರಸ್ತರ ಸಭೆಯಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿದರು. ಎ.ವಿ. ದೇಸಾಯಿ, ಅಜಯಕುಮಾರ ಸರನಾಯಿಕ, ಪ್ರಕಾಶ ಅಂತರಗೊಂಡ ಇತರರಿದ್ದರು.
Published on

ಬೀಳಗಿ: ಕಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಸಮಸ್ಯೆಗಳ ಈಡೇರಿಕೆಗೆ ಯಾವ ತ್ಯಾಗಕ್ಕೂ ಸದಾಸಿದ್ಧ, ಹೋರಾಟಕ್ಕೆ ಎಲ್ಲ ಸಹಕಾರ ಒದಗಿಸುವ ಗುರಿ ಹೊಂದಿರುವುದಾಗಿ ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ತಾಲೂಕಿನ ಅಮಲಝರಿ ಗ್ರಾಮದಲ್ಲಿ ನಡೆದ ಮುಳುಗಡೆ ಸಂತ್ರಸ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಈಗಾಗಲೇ ಉತ್ತರ ಕರ್ನಾಟಕದ ನೀರಾವರಿಯ ಬಗ್ಗೆ ಸಾಕಷ್ಟು ಭಾರಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿರುವುದಾಗಿ ತಿಳಿಸಿದ ಅವರು, ಯುಕೆಪಿ ಮೂರನೇ ಹಂತದ ಯೋಜನೆ ಪೂರ್ತಿಯಾದರೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಸುಮಾರು 15 ಲಕ್ಷ ಹೆಕ್ಟೇರ್ ಪ್ರದೇಶ ಭೂಮಿ ನೀರಾವರಿಯಾಗಲಿದೆ ಎಂದರು.

ದಕ್ಷಿಣ ಕರ್ನಾಟಕದಲ್ಲಿ ಮೂರೇ ಟಿಎಂಸಿ ನೀರಿಗೆ ಸಾಕಷ್ಟು ಹೋರಾಟ ನಡೆಯುತ್ತಿದೆ. ಆದರೆ ಪ್ರತಿ ವರ್ಷ ಕಷ್ಣಾ ನದಿಯಿಂದ 137 ಟಿಎಂಸಿ ನೀರು ಹರಿದು ಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಈ ಯೋಜನೆ ಮುಗಿದಿದೆ. ಈಗ 1.33 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಇದು ರಾಷ್ಟ್ರೀಯ ಯೋಜನೆಯಾಗಬೇಕು ಇದರಿಂದ ಅನ್ನದಾತರಿಗೆ ನೀರಾವರಿಯಾಗುವುದರೊಂದಿಗೆ ಸಾಕಷ್ಟು ಉದ್ಯಮಿಗಳೂ ಕೂಡಾ ಬರುತ್ತಿದ್ದು, ಜತೆಗೆ ಉದ್ಯೋಗಗಳು ಕೂಡಾ ದೊರೆಯುತ್ತವೆ ಎಂದರು.

ಸಂತ್ರಸ್ತರು ಒಗ್ಗಟ್ಟಾಗಿ ಹೋರಾಟದ ರೂಪರೇಷೆಗಳನ್ನು ಹಾಕಿಕೊಳ್ಳಿರಿ ಸರಕಾರದ ಗಮನ ಸೆಳೆಯೋಣ ನಿಮ್ಮ ಕಷ್ಟದಲ್ಲಿ ಯಾವ ಸಮಯದಲ್ಲಿ ಕರೆದರೂ ಬರುವುದಾಗಿ ತಿಳಿಸಿದರು.

ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಎ.ವಿ. ದೇಸಾಯಿ ಮಾತನಾಡಿ, ಆರನೇ ಗ್ಯಾರಂಟಿಯಂತೆ ಸರ್ಕಾರ ಪ್ರತಿ ವರ್ಷ ನೀರಾವರಿಗೆ 40 ಸಾವಿರ ಕೋಟಿ ರೂ. ತೆಗೆದಿಡಬೇಕು, ದಕ್ಷಿಣ ಕರ್ನಾಟಕದಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ಮುಗಿದಿವೆ. ಉತ್ತರ ಕರ್ನಾಟಕದಲ್ಲಿ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ ಎಂದು ಆರೋಪಿಸಿ, ವಿಜಯಪುರದ ಭಾಗದಲ್ಲಿ ಭೂಮಿಯ ಗೈಡ್‌ಲೈನ್ಸ್ ವ್ಯಾಲ್ಯೂ ಕೂಡಾ ಸರಿಯಾಗಿಲ್ಲ, ಇದರ ಬಗ್ಗೆ ಚಿಂತನೆ ನಡೆದಿದೆ ಶೀಘ್ರ ನಾವೆಲ್ಲರೂ ಸಂಘಟನೆಯಾಗುವುದರೊಂದಿಗೆ ಉತ್ತರ ಕರ್ನಾಟಕದ ಎಲ್ಲ ಶಾಸಕರನ್ನು ಕರೆದುಕೊಂಡು ಸರಕಾರದ ಗಮ ಸೆಳೆಯುವುದರೊಂದಿಗೆ ಬೆಳಗಾವಿಯ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ನಾವೆಲ್ಲರೂ ಮಾಡೋಣ ಎಂದರು.

ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಗೌರವ ಅಧ್ಯಕ್ಷ ಮಾಜಿ ಸಚಿವರಾದ ಅಜಯಕುಮಾರ ಸರನಾಯಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಲ್ಲಪ್ಪ ಕೌಜಲಗಿ, ಹೊಳಬಸು ಬಾಳಶೆಟ್ಟಿ, ನಾಗಪ್ಪ ಸೊರಗಾವಿ ಇತರರು ಮಾತನಾಡಿದರು. ಪ್ರಕಾಶ ಅಂತರಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೆಸರಾಂತ ವನ್ಯಜೀವಿ ಪರಿಪಾಲಕ ಎಂ.ಆರ್. ದೇಸಾಯಿ, ಎಸ್.ಟಿ. ಪಾಟೀಲ, ಎಂ.ಎಲ್. ಕೆಂಪಲಿಂಗನ್ನವರ, ಈಶ್ವರ ಪುರಾಣಿಕ, ಗೋವಿಂದಪ್ಪಗೌಡ ಪಾಟೀಲ, ಆನಂದಪ್ಪ ನಾಯ್ಕಿ, ಪಿ.ಎಸ್. ಬಿರಾದಾರ, ಗೌಡಪ್ಪಗೌಡ ಪಾಟೀಲ, ಎಂ.ಎಸ್. ಕಾಳಗಿ, ದೊಡ್ಡಣ್ಣ ದೇಸಾಯಿ, ಎಚ್. ಪಿ. ಸೊನ್ನದ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net