

ರಟ್ಟಿಹಳ್ಳಿ: ಮದಗದ ಕೆರೆ ಅಭಿವೃದ್ಧಿ ಮತ್ತು ಕೆರೆಯ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ನವೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ರ್ಚಚಿಸಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಅನುದಾನ ಮಂಜೂರಾತಿಗೆ ಪ್ರಯತ್ನಿಸಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಮದಗ ಮಾಸೂರು ಕೆಂಚಮ್ಮನ ಕೆರೆಗೆ ಮಂಗಳವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಈಗಾಗಲೇ ತುಂಗಾ ಮೇಲ್ದಂಡೆ ಕಾಲುವೆಗಳ ಆಧುನೀಕರಣಕ್ಕೆ ಸರ್ಕಾರದಿಂದ 39 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಕೆರೆಯ ಒಂದು ಭಾಗದಲ್ಲಿ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿ ಮುಂದಿನ ವರ್ಷ ಅಲ್ಲಿಂದ ಬಾಗಿನ ಅರ್ಪಣೆ ಮಾಡಲಾಗುವುದು ಎಂದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ವಿಶಾಲವಾದ ಈ ಮದಗದ ಕೆರೆಯು ಶಿಕಾರಿಪುರ ತಾಲೂಕಿನಿಂದ, ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನ ಭಾಗಗಳ ರೈತರ ಜೀವನಾಡಿಯಾಗಿದೆ. ರೈತರು ಈ ಕೆರೆಯ ಅತಿಕ್ರಮಣ ಮಾಡುವುದನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ. ಈ ಕೆರೆ ಅಂಗಳದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿ ಸದಾ ರೈತರಿಗೆ ನೀರು ಒದಗಿಸುವ ಕೆಲಸವಾಗಬೇಕು. ಶಾಸಕ ಯು.ಬಿ. ಬಣಕಾರ ಈಗಾಗಲೇ ತುಂಗಾ ಮೇಲ್ದಂಡೆ ಕಾಲುವೆ, ಮದಗ ಕೆರೆ ಹಾಗೂ ಎಡ, ಬಲ ದಂಡೆ ಕಾಲುವೆಗಳ ನವೀಕರಣ ಕಾರ್ಯಕ್ಕೆ ಆದ್ಯತೆ ನೀಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ತಿಪ್ಪಾಯಿಕೊಪ್ಪ ಮಠ, ಕಬ್ಬಿಣಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರು ಮೂಕಪ್ಪ ಶಿವಯೋಗಿ ಮಠದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸರ್ವಜ್ಞ ವಿದ್ಯಾಪೀಠ ಅಧ್ಯಕ್ಷ ಎ.ಕೆ. ಪಾಟೀಲ, ಬೆಂಗಳೂರು ಕೆಎಂಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಸಾಹಿತಿ ಡಾ.ನಿಂಗಪ್ಪ ಚಳಗೇರಿ, ಜಿಪಂ ಮಾಜಿ ಸದಸ್ಯ ನಾರಾಯಣಪ್ಪ ಗೌರಕ್ಕನವರ, ಪ್ರಕಾಶ ಬನ್ನಿಕೋಡ, ರಾಮರಾವ್ ಕರಾತ್, ಬಾಲಣ್ಣ ದೊಡ್ಡವೆಂಕಣ್ಣನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ರಮೇಶ ಮಡಿವಾಳರ, ಮಲ್ಲಿಕಾರ್ಜುನ ಬುರಡಿಕಟ್ಟಿ, ಮಹೇಶ ಗುಬ್ಬಿ, ಯಶವಂತ ಯಡಗೋಡಿ, ಸಿದ್ದಣ್ಣ ನರೇಗಲ್ಲ, ಪರಮೇಶಣ್ಣ ಕಟ್ಟೇಕಾರ, ರವೀಂದ್ರ ಮುದಿಯಪ್ಪನವರ, ಅನ್ನಪೂರ್ಣಾ ಬಣಕಾರ, ಹಿರೇಕೆರೂರು ಪಪಂ ಅಧ್ಯಕ್ಷೆ ಸುಧಾ ಚಿಂದಿ, ಮಹೇಂದ್ರ ಬಡಳ್ಳಿ, ಯುಟಿಪಿ ಅಧಿಕಾರಿ ಬಸವರಾಜಪ್ಪ, ಹನುಮಂತಪ್ಪ ಯು, ನಿಂಗಪ್ಪ ಕಡೂರು ಹಾಗೂ ತಾಲೂಕಿನ ಅನೇಕ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.
ಹಾಲಿ, ಮಾಜಿ ಶಾಸಕದ್ವಯರಿಗೆ ಮನವಿ
ಮದಗ ಕೆರೆ ಹೂಳೆತ್ತಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕು. ಎಡ ಮತ್ತು ಬಲದಂಡೆ ಕಾಲುವೆಗಳ ಮೇಲ್ಸೇತುವೆಗಳ ನವೀಕರಣ ಕೈಗೊಳ್ಳಬೇಕು. ಶಿಕಾರಿಪುರ ರಸ್ತೆಯಿಂದ ಜಲಪಾತದವರೆಗೆ ರಸ್ತೆ ಡಾಂಬರೀಕರಣ ಮಾಡಬೇಕು. ಯಾತ್ರಿ ನಿವಾಸ ನಿರ್ವಿುಸಬೇಕು. ಜಲಪಾತದ ಪಕ್ಕದಲ್ಲಿರುವ 3 ಗುಡ್ಡಗಳಿಗೆ ಏರಿಯಲ್ ರೋಪ್ ವೇ ಮಾಡಿಸಿ ಪ್ರವಾಸಿತಾಣವನ್ನಾಗಿಸಬೇಕು. ಕೆರೆಯ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಬೇಕು. ಕಾಲುವೆಗಳ ಸಿಮೆಂಟೀಕರಣ, ಜಲಪಾತದ ಬಳಿ ಕಿರು ವಿದ್ಯುತ್ ಘಟಕ ಸ್ಥಾಪನೆ, ಕೆಂಚಮ್ಮದೇವಿಯ ದೇವಸ್ಥಾನ ಅಭಿವೃದ್ಧಿ, ಈಗಿರುವ ಸಾಲಮರದ ತಿಮ್ಮಕ್ಕನ ಉದ್ಯಾನ ವಿಸ್ತರಿಸಿ ಅಭಿವೃದ್ಧಿಗೊಳಿಸುವುದು ಸೇರಿ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಮದಗ ಮಾಸೂರು ಕೆರೆ ಅಭಿವೃದ್ಧಿ ಹೋರಾಟ ಸಮಿತಿಯಿಂದ ಶಾಸಕ ಯು.ಬಿ. ಬಣಕಾರ ಮತ್ತು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರಿಗೆ ಮನವಿ ಸಲ್ಲಿಸಲಾಯಿತು.