

ಹನೂರು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ಭರವಸೆ ನೀಡಿದರು.
ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಂಗಲದ ಬಳಿ ಟಿಎಪಿಸಿಎಂಎಸ್ ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರಾಗಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಸದಸ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೊಳ್ಳೇಗಾಲ-ಹನೂರು ಟಿಎಪಿಸಿಎಂಎಸ್ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಕೊಳ್ಳೇಗಾಲದಿಂದ ಹನೂರು ಪ್ರತ್ಯೇಕಗೊಂಡಿಲ್ಲ. ಇದೀಗ ಸಂಘದ ಬೇಡಿಕೆಯಂತೆ ಸರ್ಕಾರದಿಂದ ಮಂಗಲದ ಬಳಿ 70 ಸೆಂಟ್ ಜಾಗ ಮಂಜೂರಾಗಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದರ ಮೂಲಕ ರೈತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಅಗತ್ಯ ಭರವಸೆ: ಟಿಎಪಿಸಿಎಂಎಸ್ ನಿರ್ದೇಶಕ ಮುರುಡೇಶ್ವರಸ್ವಾಮಿ ಮಾತನಾಡಿ, ಈಗಾಗಲೇ ಕ್ಷೇತ್ರದ ಗುಂಡಾಲ್ ಜಲಾಶಯಕ್ಕೆ ನದಿ ಮೂಲದಿಂದ ನೀರು ತುಂಬಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಉತ್ತಮಗೊಂಡಿದೆ. ಆದರೆ ನೀರು ತುಂಬಿಸುವ ಯೋಜನೆಗೆ ಒಳಪಟ್ಟಿದ್ದ ರಾಮನಗುಡ್ಡೆ, ಹುಬ್ಬೆಹುಣಸೆ ಜಲಾಶಯಕ್ಕೆ ಈ ಕಾರ್ಯವಾಗಿಲ್ಲ. ಜತೆಗೆ ಉಡುತೊರೆ ಜಲಾಶಯಕ್ಕೂ ನೀರು ತುಂಬಿಸುವ ಯೋಜನೆ ಅನುಷ್ಠಾನವಾಗಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಮನವಿ ಮಾಡಿದರು.
ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಕ್ಷೇತ್ರದ ರೈತರಿಗೆ ಸಮರ್ಪಕ ನೀರಾವರಿ ಸೌಕರ್ಯವನ್ನು ಒದಗಿಸುವ ಉದ್ದೇಶದಿಂದ ಈಗಾಗಲೇ ಯೋಜನೆಯನ್ನು ರೂಪಿಸಲಾಗಿದ್ದು, ಸರ್ಕಾರದ ಗಮನಕ್ಕೆ ತರಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಇದು ಕಾರ್ಯಗತಗೊಳ್ಳಲಿದೆ. ಇನ್ನು ಜಲಾಶಯಗಳಿಗೆ ನದಿ ಮೂಲದಿಂದ ನೀರು ತುಂಬಿಸಲು ಅಗತ್ಯ ಕ್ರಮವಹಿಸಲಾಗಿದೆ. ಆದ್ದರಿಂದ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಗುರುಮಲ್ಲೇಶ್ವರ ಮಠದ ಶ್ರೀ ಬಸವಣ್ಣ ಸ್ವಾಮೀಜಿ, ಟಿಎಪಿಸಿಎಂಎಸ್ ಕಾರ್ಯದರ್ಶಿ ಲಿಂಗರಾಜು, ನಿರ್ದೇಶಕ ಮುತ್ತುರಾಜು, ಪಪಂ ಉಪಾಧ್ಯಕ್ಷ ಆನಂದ್‌ಕುಮಾರ್, ಮುಖಂಡರಾದ ರಾಜುಗೌಡ, ವೆಂಕಟೇಗೌಡ, ವಿಜಯಕುಮಾರ್ ಇನ್ನಿತರರು ಇದ್ದರು.