ಬಸ್‌ನಿಲ್ದಾಣ ಅಭಿವೃದ್ಧಿಗೆ ಸಂಪೂರ್ಣ ಸಹಕಾರ

06bhr 2 (3)
ಬಾಳೆಹೊನ್ನೂರಿನ ಬಸ್‌ನಿಲ್ದಾಣದ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಟಿ.ಡಿ.ರಾಜೇಗೌಡ ಪರಿಶೀಲಿಸಿದರು. ಅಂಶುಮಂತ್, ಸದಾಶಿವ, ಕಾಶಪ್ಪ, ಮಹೇಂದ್ರ, ಜಯಪ್ರಕಾಶ್ ಇದ್ದರು.
Published on

ಬಾಳೆಹೊನ್ನೂರು: ಪಟ್ಟಣದ ಬಸ್‌ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದ ಅವರು, ಈ ಹಿಂದೆ ಶಾಸಕರ ಅನುದಾನ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರ ಅನುದಾನದಿಂದ ಬಸ್‌ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಇದೀಗ ಶೇ.70ರಷ್ಟು ಕಾರ್ಯಗಳು ಮುಗಿದಿವೆ. ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಟೈಲ್ಸ್, ಗ್ರಾನೈಟ್ ಅಳವಡಿಕೆ ನಡೆಯುತ್ತಿದೆ. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು ಎಂದರು.
ಪಟ್ಟಣದ ಪ್ರಾಥಮಿಕ ಆರೋಗ್ಯವನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರನ್ನು ನಿಯೋಜಿಸಬೇಕು ಎಂದು ಗ್ರಾಪಂ ಸದಸ್ಯರು ಒತ್ತಾಯಿಸಿದರು. ಕ್ಷೇತ್ರದಲ್ಲಿ ಈಗಾಗಲೇ ಶೃಂಗೇರಿ ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಹಾಗೂ ಜಯಪುರ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲರ್ಜೆಗೇರಿಸಲು ಆದೇಶಿಸಲಾಗಿದೆ. ಇದೀಗ ಪುನಃ ಕ್ಷೇತ್ರ ವ್ಯಾಪ್ತಿಯಲ್ಲಿರುವ ಬಾಳೆಹೊನ್ನೂರಿಗೆ ಅವಕಾಶ ಕೇಳಲು ಸಾಧ್ಯವಿಲ್ಲ. ಬೇರೆ ಕ್ಷೇತ್ರಗಳ ಶಾಸಕರು ಸಹ ಇದೇ ಬೇಡಿಕೆ ಇಡುತ್ತಾರೆ. ಸರ್ಕಾರದಲ್ಲಿ ಬೇರೆ ಮಾರ್ಗದಲ್ಲಿ ಅವಕಾಶವಿದ್ದರೆ ಆಸ್ಪತ್ರೆ ಮೇಲ್ದರ್ಜೆಗೆ ಕ್ರಮಕೈಗೊಳ್ಳಲಾಗುವುದು. ಅಗತ್ಯವಿರುವ ವೈದ್ಯರನ್ನು ಶೀಘ್ರದಲ್ಲಿ ನಿಯೋಜಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ, ಪಿಡಿಒ ಕಾಶಪ್ಪ, ಕಾರ್ಯದರ್ಶಿ ರಾಮಪ್ಪ, ಗುತ್ತಿಗೆದಾರ ಆರ್.ಡಿ.ಮಹೇಂದ್ರ, ಮುಖಂಡರಾದ ಜಯಪ್ರಕಾಶ್, ನಟರಾಜ್, ಮಹಮ್ಮದ್ ಹನ್ೀ, ಹೇಮಲತಾ, ಉಪ ತಹಸೀಲ್ದಾರ್ ಹೇಮಾ, ಕಂದಾಯ ನಿರೀಕ್ಷಕ ಮಂಜು, ಗ್ರಾಮ ಲೆಕ್ಕಿಗೆ ಸಮೀಕ್ಷಾ, ನಾಗಶ್ರೀ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net