ಪಠ್ಯ ರಚನಾ ಸಮಿತಿಗೆ ಪೂರ್ಣ ಸ್ವಾಯತ್ತತೆ ಅಗತ್ಯ

1
Published on

ಪಠ್ಯಕ್ರಮ ರಚನಾ ಸಮಿತಿಗೆ ಪೂರ್ಣ ಸ್ವಾಯತ್ತತೆ ನೀಡಬೇಕು. ಪಠ್ಯಕ್ರಮಗಳನ್ನು ರಚಿಸಿದ ಮೇಲೆ ಕನಿಷ್ಠ ಹತ್ತು ವರ್ಷಗಳ ಕಾಲ ಇರುವಂತೆ ನೋಡಿಕೊಳ್ಳಬೇಕೆ ಹೊರತು ಕಾಲಕಾಲಕ್ಕೆ ಮತ್ತು ಅನುಕೂಲಕ್ಕೆ ತಕ್ಕಂತೆ ಪಠ್ಯವನ್ನು ಬದಲಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಖ್ಯಾತ ವಾಗ್ಮಿ ಡಾ.ವೀಣಾ ಬನ್ನಂಜೆ ಒತ್ತಾಯಿಸಿದರು.

ನಗರದ ಕಲಾಮಂದಿರದಲ್ಲಿ ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳು ಆಯೋಜಿಸಿದ್ದ ಶತೋತ್ತರ-ಸುವರ್ಣ-ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಒಮ್ಮೆ ರಚನೆಯಾದ ಪಠ್ಯವನ್ನು ಬದಲಿಸುವ ಅಥವಾ ಕೈಬಿಡುವಂತೆ ಸರ್ಕಾರ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು. ಮಕ್ಕಳ ಮತ್ತು ಶಿಕ್ಷಕರ ಮೇಲೆ ದೌರ್ಜನ್ಯ ಎಸಗಬಾರದು ಎಂದರು.

ವಿದ್ಯೆ ಎನ್ನುವುದರ ಕುರಿತು ಏನನ್ನು ಗೊತ್ತಿಲ್ಲದವರು, ಅರಿಯದವರು ಸಮಿತಿಯಲ್ಲಿ ಇರುವುದು ಬೇಡ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ ಪಂಡಿತರ ಸಮ್ಮುಖದಲ್ಲಿ ಸಮಿತಿ ರಚನೆ ಮಾಡಬೇಕು. ಇಂದಿನ ಮಕ್ಕಳಿಗೆ ಯಾವ ಶಿಕ್ಷಣ ಕೊಡಬೇಕೆಂದು ಯೋಚಿಸಬೇಕೇ ಹೊರತು ಅವರ ಪಠ್ಯವನ್ನು ತೆಗೆಯಿರಿ, ಇವರದ್ದು ಸೇರಿಸಿ ಅಂತ ಹೇಳುವುದಲ್ಲ ಎಂದು ಹೇಳಿದರು.

ಮಾನಸಿಕ ಒತ್ತಡ ತಾಳಲಾರದೆ 25 ವರ್ಷದೊಳಗಿನ ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪಲು ಇಂದಿನ ಶಿಕ್ಷಣ ದೋಷವೇ ಕಾರಣವಾಗಿದೆ. ಮಕ್ಕಳು ವಾರದಲ್ಲಿ ಕನಿಷ್ಠ ಏಳು ಗಂಟೆಗಳ ಕಾಲ ವ್ಯಾಯಾಮ ಮಾಡುವಂತೆ ಗಮನಿಸಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಅಂದರೆ ಶಾಲೆ, ರ‌್ಯಾಂಕ್, ಉದ್ಯೋಗ, ಸಂಬಳ ಎನ್ನುವಂತಾಗಿದೆ. ಶಾಲೆಯಲ್ಲಿ ಶಿಕ್ಷಕರು ಒತ್ತಡ ಹೇರಿದರೆ, ಮನೆಯಲ್ಲಿ ಪೋಷಕರು ಒತ್ತಡ ಹೇರುತ್ತಾರೆ. ಶಾಲಾ ಶಿಕ್ಷಣವನು ್ನಕಡಿಮೆ ಮಾಡಿ ಬೇರೆ ಶಿಕ್ಷಣವನ್ನು ಜಾಸ್ತಿ ಮಾಡಲು ಗಮನಹರಿಸಬೇಕು. ಶಾಲಾ ಹಂತದಲ್ಲಿ ಬದಲಾವಣೆ ಆಗಬೇಕು ಹೊರತು ಮೇಲ್ಮಟ್ಟದಲ್ಲಿ ನಡೆಯಲ್ಲ. ಒಂದು ಕಾಲದಲ್ಲಿದ್ದ ಶಿಕ್ಷಕರಿಗೆ ಇದ್ದ ಗೌರವ ಈಗ ಇಲ್ಲ. ಹಾಗೆಯೇ ಮಕ್ಕಳಿಗೆ ಶಿಕ್ಷಣದ ದಾಹ ಕಡಿಮೆಯಾಗಿದೆ ಎಂದು ಹೇಳಿದರು.

ಇಂಗ್ಲಿಷ್ ಭಾಷೆಯ ಮೇಲೆ ವ್ಯಾಮೋಹ ಹೆಚ್ಚಾಗುತ್ತಿದ್ದಂತೆ ಭಾರತೀಯ ಪರಂಪರೆಯ ಸಂಸ್ಕೃತಿ ದೂರವಾಗುತ್ತಿದೆ. ಸಂಸ್ಕೃತ ಕಲಿತರೆ ನಮ್ಮ ಗುರುಕುಲದ ಶಿಕ್ಷಣವನ್ನು ಕಲಿತಂತಾಗಲಿದೆ. ಶಾಲೆಯಲ್ಲಿ ಮಕ್ಕಳಿಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವ ಬಗ್ಗೆ ಹೇಳಬೇಕು.

ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರ ಆಶೀರ್ವಾದದಿಂದ ಮುಂದೆ ಬಂದರು. ಜಗತ್ತಿಗೆ ನ್ಯಾಯ ಕೊಡುವಂತಹ ಮಹಾನ್ ಸಾಧಕರಾಗಿ ಹೊರ ಹೊಮ್ಮಿದರು. ಮೈಸೂರಿಗೆ ಆಗಮಿಸಿದ್ದಾಗ ಹದಿನೈದು ದಿನಗಳ ಕಾಲ ಇದ್ದು ಉಪನ್ಯಾಸ ನೀಡಿ ಶಿಕಾಗೋ ಸಮ್ಮೇಳನಕ್ಕೆ ಹೋದ ಮೇಲೆ ಆರಂಭವಾದ ಶಿಕ್ಷಣ ಸಂಸ್ಥೆಯು ಸದಾ ಅವರ ಹೆಸರು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಲು ಮುಂದಾಗಬೇಕು ಎಂದರು.

ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸಿ.ಆರ್.ನಾಗರಾಜ್, ಗೌರವ ಕಾರ್ಯದರ್ಶಿ ಪ್ರೊ.ಎಂ.ಎಸ್.ಕೆ.ನರಹರಿಬಾಬು, ಸಹ ಕಾರ್ಯದರ್ಶಿ ಪ್ರೊ.ಕೆ.ಎಸ್.ಹಿರಿಯಣ್ಣ, ಆಡಳಿತ ಮಂಡಳಿ ಸದಸ್ಯರಾದ ಎಂ.ಡಿ.ಗೋಪಿನಾಥ್, ಆರ್.ಎಸ್.ಪ್ರಸನ್ನ, ಡಾ.ನಳಿನಿ ಚಂದರ್, ಎಸ್.ಆರ್.ಭಾಗ್ಯಶ್ರೀ, ಡಾ.ಜಿ.ವಿ.ನರಸಿಂಹನ್, ಪ್ರೊ.ಸಿ.ಎಸ್.ಯದುನಂದನ್ ಇದ್ದರು.

ಬಳಿಕ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಕ್ಕಳು ತಮ್ಮ ಕಲೆಗಳನ್ನು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಶಾಲಾ ಮಕ್ಕಳು ಗುಂಪು ನೃತ್ಯಗಳನ್ನು ಮಾಡಿ ಗಮನ ಸೆಳೆದರು.

ಕೋಟ್ರಾಜಕಾರಣಿಗಳಿಗೂ ಧರ್ಮಕ್ಕೂ ಸಂಬಂಧವೇ ಇಲ್ಲ. ಹೀಗಿದ್ದರೂ ಧರ್ಮದ ವಿಚಾರದಲ್ಲಿ ನಿರ್ಣಯ ಮಾಡುತ್ತಾರೆ. ಧರ್ಮಕ್ಕೆ ಬೇಕಾದ ನಿರ್ಣಯ ಮಾಡಬೇಕಾದರೆ ಒಂದು ಸಮಿತಿ ರಚಿಸಿ ಅಲ್ಲಿ ಚರ್ಚೆಯಾದ ಮೇಲೆ ಅದರಿಂದ ಪೂರಕ ವಿಚಾರಗಳನ್ನು ಪಡೆಯಬೇಕೆ ಹೊರತು ರಾಜಕಾರಣಿಗಳು ಮಾಡುವ ಕೆಲಸವಲ್ಲ.-ಡಾ.ವೀಣಾ ಬನ್ನಂಜೆ, ಖ್ಯಾತ ವಾಗ್ಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net