ಚಾಲಕರ ವರ್ಷಗಳ ಬೇಡಿಕೆ ಈಡೇರಿಕೆ

Ism_drivers
Published on

ಪುತ್ತೂರು ಗ್ರಾಮಾಂತರ: ಬಿಸಿಲು ಮಳೆ ಲೆಕ್ಕಿಸದೆ ಜೀವನಕ್ಕಾಗಿ ದುಡಿಯುವ ರಿಕ್ಷಾ ಚಾಲಕರು ಜನತೆ ಪಾಲಿಗೆ ಆಪತ್ಭಾಂಧವರಾಗಿದ್ದು, ಇಲ್ಲಿನ ರಿಕ್ಷಾ ಚಾಲಕರ ಹಲವು ವರ್ಷಗಳ ರಿಕ್ಷಾ ತಂಗುದಾಣದ ಬೇಡಿಕೆ ಈಡೇರಿಸಲಾಗಿದೆ. ಈ ಹಿಂದೆ ಇಲ್ಲಿ ಶಾಸಕರಾಗಿದ್ದವರು ಕೇವಲ ಭಾಷಣ ಮಾಡಿದ್ದು ಮಾತ್ರ. ಆದರೆ ನಾವು ಭಾಷಣದ ಜತೆಗೆ ಕೆಲಸವನ್ನೂ ಮಾಡುತ್ತಿದ್ದೇವೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಆರ್ಯಾಪು ಗ್ರಾಮದ ಸಂಪ್ಯದಲ್ಲಿ ನೂತನವಾಗಿ ನಿರ್ಮಿಸಲಾದ ಅಟೋ ತಂಗುದಾಣ ಉದ್ಘಾಟಿಸಿ ಮಾತನಾಡಿದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಅಭಿವೃದ್ಧಿ ಕಾರ್ಯದಲ್ಲಿ ಅಶೋಕ್ ಕುಮಾರ್ ರೈ ಕರ್ನಾಟಕದ ನಂಬರ್ 1 ಶಾಸಕರಾಗಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 1480 ಕೋಟಿ ರೂ. ಅನುದಾನ ಬಂದಿದೆ. ಇದುವರೆಗೂ ಯಾವ ಶಾಸಕರು ಇಷ್ಟೊಂದು ಪ್ರಮಾಣದಲ್ಲಿ ಅನುದಾನ ತಂದಿಲ್ಲ ಎಂದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 20ಕ್ಕೂ ಮಿಕ್ಕಿ ಆಟೋ ತಂಗುದಾಣಗಳ ನಿರ್ಮಾಣ ಕಾರ್ಯ ನಡೆಯಲಿದೆ. ರಿಕ್ಷಾ ಚಾಲಕರ ಬೇಡಿಕೆ ಶಾಸಕರು ಈಡೇರಿಸುತ್ತಿದ್ದಾರೆ ಎಂದರು.

ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಶೋಕ್ ನಾಯ್ಕ, ಉಪಾಧ್ಯಕ್ಷ ನಾಸಿರ್ ಇಡಬೆಟ್ಟು, ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್, ಗುತ್ತಿಗೆದಾರ ಸಿಯಾನ್ ದರ್ಬೆ, ಸಲಾಂ ಸಂಪ್ಯ ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ನೇಮಾಕ್ಷ ಸುವರ್ಣ ಸ್ವಾಗತಿಸಿ, ನಿರೂಪಿಸಿದರು.

ಚುನಾವಣೆ ಸಂದರ್ಭದಲ್ಲಿ ನಾವು ಜನತೆಗೆ ನೀಡಿದ್ದ ಭರವಸೆ ಈಡೇರಿಸುವ ಕೆಲಸ ಮಾಡುತ್ತಿದ್ದೇವೆ, ಮುಂಡೂರು ಗ್ರಾಮದಲ್ಲಿ 20 ಎಕರೆ ಜಾಗದಲ್ಲಿ ಈಜುಕೊಳ, ಜಿಮ್ ಸೇರಿದಂತೆ ಆರೋಗ್ಯ ಕಾಪಾಡುವಲ್ಲಿ ಬೇಕಾದ ಎಲ್ಲ ವ್ಯವಸ್ಥೆಗಳನ್ನೊಳಗೊಂಡ ಬೃಹತ್ ಕ್ರೀಡಾಂಗಣ ನಿರ್ಮಿಸಲು ಈಗಾಗಲೇ ಜಾಗ ಗುರುತಿಸಲಾಗಿದ್ದು, ಅದಕ್ಕೆ ಬೇಕಾದ ಸಿದ್ಧತೆ ಪೂರ್ಣಗೊಂಡಿದೆ. ಬಿರುಮಲೆ ಬೆಟ್ಟ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಬರಲಿದ್ದು, ಈಗಾಗಲೇ 2 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಅಶೋಕ್‌ಕುಮಾರ್ ರೈ, ಪುತ್ತೂರು ಶಾಸಕ https://www.vijayavani.net/high-respect-for-party-workers https://www.vijayavani.net/mindadka-darbe-road-concrete-work-started

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net