

ಕಡೂರು: ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗ್ರಾಮಆಡಳಿತ ಅಧಿಕಾರಿಗಳು ತಾಲೂಕು ಕಚೇರಿ ಆವರಣದಲ್ಲಿ ನಡೆಸುತ್ತಿರುವ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರದ ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಯೋಗೀಶ್ ಭೇಟಿ ನೀಡಿದರು.
ನಂತರ ಮಾತನಾಡಿದ ಅವರು, ರಾಜ್ಯಾದ್ಯಂತ ಗ್ರಾಮ ಆಡಳಿತಾಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆ ಬಗ್ಗೆ ಸರ್ಕಾರದ ಗಮನಹರಿಸಬೇಕಿದೆ. ಮೊದಲ ಬಾರಿ ಧರಣಿ ನಡೆಸಿದಾಗ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಈವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ನಮ್ಮ ಹಕ್ಕುಗಳನ್ನು ಮಾತ್ರ ನಾವು ಕೇಳುತ್ತಿದ್ದೇವೆ. ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದರು.
ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ಸಾರ್ವಜನಿಕರ ಕೆಲಸಗಳ ಮೇಲೆ ಪರಿಣಾಮ ಬೀರುತ್ತಿದೆ. ಕಂದಾಯ ಇಲಾಖೆ ವ್ಯಾಪ್ತಿಯ ಕೆಲಸಗಳನ್ನು ತಳಮಟ್ಟದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಕೆ ಸರ್ಕಾರದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಸಂಚಾಲಕ ಸಿದ್ದಪ್ಪ, ಲಿಂಗರಾಜು, ಶೃತಿ, ಸಂತೋಷ್ ಕುಮಾರ್, ಬಿ.ಎಂ.ರಮೇಶ್, ತೇಜಸ್, ಸುಮಾ, ರಂಜಿತಾ ಮತ್ತಿತರಿದ್ದರು.