ಕಲೆ ಪೋಷಣೆಗೆ ವಿಶೇಷ ಯೋಜನೆ ಜಾರಿಗೆ ತರಲಿ

Kampli Award
ಕಂಪ್ಲಿಯಲ್ಲಿ ಸಂಗೀತ ಭಾರತಿ ಅಧ್ಯಕ್ಷ ಎಚ್.ಪಿ.ಕಲ್ಲಂಭಟ್ ಅವರಿಗೆ ರಾಜ್ಯಮಟ್ಟದ ಪರಶುರಾಮಪ್ಪ ಚಿತ್ರಗಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬುಕ್ಕಸಾಗರದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯರು, ಪ್ರಮುಖರಾದ ಡಾ.ಚಲುವರಾಜ್, ಸುಮಿತ್ರಮ್ಮ ಪರಶುರಾಮಪ್ಪ ಚಿತ್ರಗಾರ್, ಎಂ.ಸುಧೀರ್, ಗೊಗ್ಗ ಕಾರ್ತಿಕ್ ಇತರರಿದ್ದರು.
Published on

ಕಂಪ್ಲಿ: ಕಲಾವಿದರು, ಸಂಘಟಕರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಅರ್ಹ ಕಲಾವಿದರಿಗೆ ಸೂಕ್ತ ಮನ್ನಣೆ ದೊರಕುತ್ತಿಲ್ಲ ಎಂದು ಹೊಸಪೇಟೆ ಸಂಗೀತ ಭಾರತಿ ಸಂಸ್ಥಾಪಕ ಅಧ್ಯಕ್ಷ ಎಚ್.ಪಿ.ಕಲ್ಲಂಭಟ್ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಪರಶುರಾಮಪ್ಪ ಚಿತ್ರಗಾರ ವಿಜಯನಗರ ಜನಪದ ಕರಕುಶಲ ಕಲೆಗಳ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಶುರಾಮಪ್ಪ ಚಿತ್ರಗಾರ ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ಸಾಗಬೇಕಿದೆ. ಕಲಾವಿದರ ಕಲೆ ಪೋಷಿಸಲು ಮತ್ತು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸರ್ಕಾರ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದೆ ಎಂದರು.

ಇದನ್ನೂ ಓದಿ: ರಾಜ್ಯಮಟ್ಟದ ಪ್ರಶಸ್ತಿಗೆ ತಿಪ್ಪೇಸ್ವಾಮಿ ಭಾಜನ
ಟ್ರಸ್ಟ್ ಗೌರವಾಧ್ಯಕ್ಷ ಡಾ.ಚಲುವರಾಜ್ ಮಾತನಾಡಿ, ಪರಶುರಾಮಪ್ಪ ಚಿತ್ರಗಾರ ಕಿನ್ನಾಳ ಕಲೆ ಮೂಲಕ ಸಮುದಾಯಗಳೊಂದಿಗೆ ಜೀವಂತಿಕೆಯ ಸಂಬಂಧ ಇಟ್ಟುಕೊಂಡಿದ್ದರು. ಅಲ್ಲದೆ ಪರಂಪರೆ ಮತ್ತು ಆಚಾರವಿಚಾರಗಳನ್ನು ಮೈಗೂಡಿಸಿಕೊಂಡು ಕಲೆ ಪೋಷಿಸುವಲ್ಲಿ ಪರಶುರಾಮಪ್ಪ ಚಿತ್ರಗಾರ ಪ್ರಮುಖ ಪಾತ್ರವಹಿಸಿದ್ದಾರೆ ಎಂದರು.

ಗುಳೇದಗುಡ್ಡದ ನಿವೃತ್ತ ಪ್ರಾಚಾರ್ಯ ನಾರಾಯಣರಾವ್ ಬಿ.ಚಿತ್ರಗಾರ್ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಕಲಾವಿದರ ಪಾತ್ರ ಮಹತ್ವದ್ದಾಗಿದೆ. ಗ್ರಾಮೀಣ ಪ್ರದೇಶದ ಕಲೆಗಳನ್ನು ಪರಶುರಾಮಪ್ಪ ಪೋಷಿಸುವ ಮೂಲಕ ವಿಜಯನಗರ ಕಿನ್ನಾಳ ಚಿತ್ರಕಲೆಗೆ ಹೊಸತನ ತಂದುಕೊಟ್ಟಿದ್ದಾರೆ ಎಂದರು.

ಬುಕ್ಕಸಾಗರದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ಸುಧೀರ್ ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷೆ ಸುಮಿತ್ರಮ್ಮ ಪರಶುರಾಮಪ್ಪ ಚಿತ್ರಗಾರ್, ಪ್ರಮುಖರಾದ ಗೊಗ್ಗ ಕಾರ್ತಿಕ್, ಡಾ.ಜಗನ್ನಾಥ ಹಿರೇಮಠ, ವಾಲಿ ಕೊಟ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net