ಇಂಧನ ಬೆಲೆ ಏರಿಕೆ ಖಂಡಿಸಿ ಹರಿಹರದಲ್ಲಿ ಪ್ರತಿಭಟನೆ

192
ಇಂಧನ ದರ ಏರಿಕೆ ಖಂಡಿಸಿ ಕರವೇ ನೇತೃತ್ವದಲ್ಲಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದವರು ಹರಿಹರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ರಮೇಶ್ ಮಾನೆ, ಪ್ರೀತಮ್ ಬಾಬು, ಸಿದ್ದಲಿಂಗ ಸ್ವಾಮಿ ಇತರರಿದ್ದರು.
Published on

ಹರಿಹರ: ಪೆಟ್ರೋಲ್, ಡೀಸೆಲ್ ಹಾಗೂ ದಿನಸಿ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನೇತೃತ್ವದಲ್ಲಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ರಾಣಿ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲೂಕು ಕಚೇರಿ ತಲುಪಿ ಗ್ರೇಡ್-2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಜನಪರ ಆಡಳಿತ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇಂಧನ ದರ ಏರಿಸುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ. ಈಗಾಗಲೇ ಗಗನಕ್ಕೇರಿರುವ ದಿನಬಳಕೆ ವಸ್ತುಗಳು ಮತ್ತಷ್ಟು ತುಟ್ಟಿಯಾಗಲಿವೆ. ಬಡವರು ಬದುಕು ನಡೆಸುವುದು ದುಸ್ತರವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆ ಇದ್ದರೂ ಕೇಂದ್ರ ಸರ್ಕಾರ ಗರಿಷ್ಠ ಪ್ರಮಾಣದ ಸೆಸ್ ವಿಧಿಸುವ ಮೂಲಕ ಕಳ್ಳದಾರಿಯಲ್ಲಿ ಜನರಿಗೆ ವಂಚಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರುಮುಖವಾಗಿಯೇ ಇದೆ. ಸರ್ಕಾರ ಕೂಡಲೇ ಇಂಧನ ಬೆಲೆ ಏರಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಕರವೇ ತಾಲೂಕು ಅಧ್ಯಕ್ಷ ರಮೇಶ್ ಮಾನೆ, ನಗರ ಘಟಕ ಅಧ್ಯಕ್ಷ ಪ್ರೀತಮ್ ಬಾಬು, ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಗೌರವ ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಅಧ್ಯಕ್ಷ ಮೋಹನ್ ಗೌಡ, ನಗರಸಭಾ ಸದಸ್ಯ ಆಟೋ ಹನುಮಂತಪ್ಪ, ನಾಗರಾಜ್ ಮಹಮದ್ ನಜೀರ್, ಕೇಶವ್, ಸಿದ್ದಪ್ಪ, ಅಲಿ ಅಕ್ಬರ್, ಹೈದರ್, ಸಂತೋಷ್, ದುರ್ಗಪ್ಪ, ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net