ಸೀರೆ ನಾಡಲ್ಲಿ ಸೀತಾಫಲ ಭರಾಟೆ

DJ MLK SITHAPALA
Published on

ಕೆ.ಕೆಂಚಪ್ಪ, ಮೊಳಕಾಲ್ಮೂರು
ಬಯಲುಸೀಮೆ ಪ್ರದೇಶವಾಗಿರುವ ಮೊಳಕಾಲ್ಮೂರು ರೇಷ್ಮೆ ಗೂಡು ಉತ್ಪಾದನೆ ಹಾಗೂ ಸೀರೆ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಹಣ್ಣಿನ ಬೆಳೆಯಲ್ಲೂ ಖ್ಯಾತಿ ಪಡೆಯುವತ್ತ ದಾಪುಗಾಲಿರಿಸಿದೆ.

ಸಾಮಾನ್ಯವಾಗಿ ಕೋಲಾರ ಭಾಗದಲ್ಲಿ ಸೀತಾಫಲ ಹಣ್ಣು ಹೆಚ್ಚಾಗಿ ದೊರೆಯುತ್ತದೆ. ಆದರೆ ಈ ವರ್ಷ ಸುರಿದ ಮಳೆಯಿಂದಾಗಿ ಮೊಳಕಾಲ್ಮೂರಿನಲ್ಲೂ ಸೀತಾಫಲ ಹೇರಳವಾಗಿ ದೊರಕುತ್ತಿದೆ. ಪ್ರತಿವರ್ಷ ಇಲ್ಲಿ ಬೆಳೆಯುವ ಸೀತಾಫಲಕ್ಕೆ ವಿಶೇಷ ಮನ್ನಣೆ ಮತ್ತು ಬೇಡಿಕೆ ದೊರಕಿದೆ.

ಅಡವಿ ಹಣ್ಣು ಬಲು ರುಚಿ: ಯಾವುದೇ ರಾಸಾಯನಿಕ ಗೊಬ್ಬರ ಅಥವಾ ರೈತರು ಉಳುಮೆ ಮಾಡಿ ಸಸಿ ನೆಟ್ಟು ಪೋಷಣೆ ಮಾಡಿದ ಬೆಳೆಯಲ್ಲ. ವರ್ಷದಲ್ಲಿ ಉತ್ತಮ ಮಳೆ ಬಂದರೆ ಸಾಕು ಬೆಟ್ಟ ಗುಡ್ಡ, ಅಡವಿ, ಹಳ್ಳಕೊಳ್ಳ, ಜಮೀನು ಅಥವಾ ಬಂಡೆಗಳ ಸಂದಿಗೊಂದಿಗಳಲ್ಲಾದರೂ ಸರಿ. ಇರುವ ಗಿಡಗಳು ಸ್ವಾಭಾವಿಕವಾಗಿ ಬೆಳೆದು ಕಾಯಿ ಕಟ್ಟಲಿವೆ.

ಹದಕ್ಕೆ ಬಂದ ಹಣ್ಣು ತವರು ಜಿಲ್ಲೆಯಲ್ಲದೇ ಬೆಂಗಳೂರು, ತುಮಕೂರು, ಮೈಸೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ನೆರೆಯ ಆಂಧ್ರಪ್ರದೇಶಕ್ಕೂ ಟನ್ ಲೆಕ್ಕದಲ್ಲಿ ರವಾನೆಯಾಗುತ್ತವೆ.

ಲಕ್ಷಾಂತರ ರೂ.ವ್ಯಾಪಾರ: 3 ವರ್ಷಗಳ ಕಾಲ ಮಳೆಯ ಅಭಾವದಿಂದ ಅಳಿವಿನಂಚಿನಲ್ಲಿದ್ದ ಸೀತಾಫಲಕ್ಕೆ ಈ ಬಾರಿಯ ಮಳೆ ವರದಾನವಾಗಿದೆ. ಪುನರ್ಜನ್ಮ ಕಂಡುಕೊಂಡ ಈ ಹಣ್ಣು ಕಳೆದೊಂದು ತಿಂಗಳಿಂದ ಲೋಡ್‌ಗಟ್ಟಲೆ ಸರಬರಾಜಾಗುತ್ತಿದ್ದು ಲಕ್ಷಾಂತರ ರೂ ವಹಿವಾಟಾಗುತ್ತಿದೆ.

ಕೂಲಿಕಾರ್ಮಿಕರ ಪಾಲಿಗಂತೂ ಇದು ಬಾದಾಮಿಯಾಗಿದೆ. ಪ್ರತಿದಿನ ಪ್ಲಾಸ್ಟಿಕ್ ಚೀಲಗಳನ್ನಿಡಿದು ಕಾಡುಪ್ರಾಣಿಗಳ ಉಪಟಳದ ನಡುವೆ ಜೀವ ಭಯದಲ್ಲಿ ಅಡವಿಗೆ ಹೋಗುವ ಪರಿ ನಿಜಕ್ಕೂ ಸಾಹಸವೇ ಸರಿ.

ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಪ್ರದೇಶ ಹೊರತುಪಡಿಸಿದರೆ ಉಳಿದೆಡೆಯ ಸೀತಾಫಲ ಕೀಳಲು ಯಾರ ನಿರ್ಬಂಧವಿಲ್ಲ. ಹೀಗಾಗಿ 3 ತಿಂಗಳ ಕಾಲ ಬಡ ಕುಟುಂಬಗಳ ಜೀವನ ನಿರ್ವಹಣೆಗಿದು ಆಸರೆಯಾಗಲಿದೆ. ಈ ವರ್ಷ ಅಧಿಕ ಇಳುವರಿ ಬಂದಿದೆ. 20 ಕೆಜಿ ಹಣ್ಣಿಗೆ 800 ರೂ. ವರೆಗೆ ಬೆಲೆ ಇದೆ.

ಪ್ರಸ್ತುತ ಮೊಳಕಾಲ್ಮೂರು, ಹಾನಗಲ್, ರಾಯಪುರ, ರಾಂಪುರ, ಅಶೋಕ ಸಿದ್ದಾಪುರ ಸೇರಿ ಹಲವು ಗ್ರಾಮಗಳಿಂದ ದಿನಕ್ಕೆ ನೂರಾರು ಚೀಲ ನಗರಕ್ಕೆ ರವಾನೆಯಾಗುತ್ತಿದೆ. ಸವಿದವರೇ ಬಲ್ಲರು ಸೀತಾಫಲದ ರುಚಿ. ಉತ್ತಮ ಆರೋಗ್ಯ ಬೆಳವಣಿಗೆಗೆ ಸೀತಾಫಲ ನಾಟಿ ಔಷಧ. ವರ್ಷಕ್ಕೆ ಒಮ್ಮೆಯಾದರೂ ಒಂದೆರಡು ಹಣ್ಣನ್ನು ಪ್ರತಿಯೊಬ್ಬರೂ ತಿನ್ನಲೇಬೇಕೆಂಬ ಪೂರ್ವಜರ ಮಾತಿದೆ.

ಕಳೆದ ವರ್ಷ ಬರ ತಂದ ಫಜೀತಿ ನೆನಸಿಕೊಂಡರೆ ಆಘಾತವಾಗುತ್ತದೆ. ಬಿರುಬಿಸಿಲು ಮತ್ತು ಬಂಡೆಗಳ ತಾಪಕ್ಕೆ ನಿತ್ರಾಣವಾಗಿದ್ದ ಗಿಡಗಳು ಅಸ್ತಿತ್ವ ಕಳೆದುಕೊಳ್ಳುವ ಅಂಚಿನಲ್ಲಿದ್ದವು. ಈ ವರ್ಷ ವರುಣನ ಕೃಪೆಯಿಂದ ಉತ್ತಮ ಇಳುವರಿಯಾಗಿದೆ. ನೂರಾರು ಕೂಲಿ ಕಾರ್ಮಿಕರಿಗೆ ಒಂದೆರಡು ತಿಂಗಳ ಕಾಲ ಉದ್ಯೋಗ ಸಿಕ್ಕಿದೆ. ಪಾಳೇಗಾರ ಸಿದ್ದಣ್ಣ, ಮೊಳಕಾಳ್ಮೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net