ಬಿಸಿಲಿನಲ್ಲಿ ಹಣ್ಣಿನ ರಸ ಸೇವೆನೆ ಅತ್ಯಗತ್ಯ

ನಗುವನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಡಿ.ಬೆನ್ನೂರ ಮಾತನಾಡಿದರು.
ನಗುವನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಡಿ.ಬೆನ್ನೂರ ಮಾತನಾಡಿದರು.
Published on

ಶ್ರೀರಂಗಪಟ್ಟಣ: ಪ್ರಸಕ್ತ ವರ್ಷದಲ್ಲಿ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ಆರೋಗ್ಯದ ಬಗ್ಗೆ ಎಚ್ಚ ವಹಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಸಲಹೆ ನೀಡಿದರು.

ತಾಲೂಕಿನ ನಗುವನಹಳ್ಳಿ ಗ್ರಾಮದ ರಾಮಮಂದಿರ ಬೀದಿಯಲ್ಲಿ  ತಾಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ಆಯೋಜಿಸಿದ್ದ ಬಿಸಿಲಿನಿಂದ ಆರೋಗ್ಯ ರಕ್ಷಣೆಗೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಚ್ಚು ನೀರು ಕುಡಿಯುವುದರ ಜತೆಗೆ ಎಳನೀರು, ಮಜ್ಜಿಗೆ, ಹಣ್ಣಿನ ರಸಗಳನ್ನು ಹೆಚ್ಚಾಗಿ ಸೇವಿಸಬೇಕು. ದೇಹದಲ್ಲಿ ನೀರಿನಂಶ ಹೆಚ್ಚು ಮಾಡುವ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವುದು ಉತ್ತಮ. ಸಡಿಲ, ತೆಳು ಬಣ್ಣದ ಹತ್ತಿ ಬಟ್ಟೆಯೊಂದಿಗೆ ಗಾಳಿಯಾಡುವ ಪಾದರಕ್ಷೆಯನ್ನು ಬಳಸಬೇಕು. ಮನೆಯಿಂದ ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಅಗತ್ಯವಾಗಿ ಪಾಲಿಸಬೇಕು ಎಂದರು.

ರೇಡಿಯೋ, ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಬಿಸಿಯಾದ ಗಾಳಿ ಶಾಖ ತರಂಗದ ಬಗ್ಗೆ ನೀಡುವ ಮಾಹಿತಿ ಅನುಸಾರ ದೈನಂದಿನ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು. ಬಿಸಿಲಿನಲ್ಲಿ ಹೊರಗಡೆ ಕಾರ್ಯ ನಿರ್ವಹಿಸುವುದನ್ನು ಬೆಳಗ್ಗೆ 11ರೊಳಗೆ ಮತ್ತು ಸಂಜೆ 4 ಬಳಿಕ ಕೈಗೊಳ್ಳುವುದು ಉತ್ತಮ. ಬಿಸಿಲು ಹೆಚ್ಚಿರುವ ಅವಧಿಯಲ್ಲಿ ಆಗಾಗ್ಗೆ ವಿಶ್ರಾಂತಿ ಅವಶ್ಯಕ ಎಂದು ಸಲಹೆ ನೀಡಿದರು.

ಮುಖಂಡರಾದ ಪುರುಷೋತ್ತಮ, ಬೋರಯ್ಯ, ಮಹೇಶ, ವಿಜೇಂದ್ರ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್.ಕೃಷ್ಣೇಗೌಡ, ಸಮುದಾಯ ಆರೋಗ್ಯಾಧಿಕಾರಿ ಸಹನಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಿನಯಾ, ಆಶಾ ಕಾರ್ಯಕರ್ತೆಯರಾದ ಸುಮಾ, ಲಕ್ಷ್ಮೀ, ಲೀಲಾ, ನೇತ್ರಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net