ಈದ್ ಮಿಲಾದ್ ಅಂಗವಾಗಿ ರೋಗಿಗಳಿಗೆ ಹಣ್ಣು ವಿತರಣೆ

16 ckm 3
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು. ಮಹಮದ್ ನಯಾಜ್, ಮೊಹಮ್ಮದ್ ಖಾಸೀಂ, ಸಲ್ಮಾನ್, ತಬ್ರೇಜ್, ಆಜಾದ್, ಸಮೀರ್ ಶೇಟ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಈದ್‌ಮಿಲಾದ್‌ನ ಪ್ರವಾದಿ ಮುಹಮ್ಮದ್ ಮುಸ್ತಫಾರ ೧೪೯೯ನೇ ಜನ್ಮದಿನದ ಅಂಗವಾಗಿ ಮೊಹರಂ ಚಾರಿಟಬಲ್ ಟ್ರಸ್ಟ್ನ ಪದಾಧಿಕಾರಿಗಳು ನಗರದ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಸೋಮವಾರ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ವೇಳೆ ಮಾತನಾಡಿದ ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಪ್ರವಾದಿ ಮುಹಮ್ಮದ್ ಅವರು ಸರ್ವ ಧರ್ಮದ ಹಿತಚಿಂತಕರಾಗಿದ್ದರು. ಎಲ್ಲ ಮಾನವರು ಒಂದೇ ಎಂಬ ತತ್ವ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿ. ಅಂಥ ಮಹಾನೀಯರ ಆಚರಣೆ, ಸಂದೇಶಗಳನ್ನು ಎಲ್ಲೆಡೆ ಆಚರಿಸುತ್ತಿರುವುದು ಸಾಮಾನ್ಯದ ಸಂಗತಿಯಲ್ಲ ಎಂದು ಹೇಳಿದರು.
ಮಾನವ ಜನ್ಮ ಸಂಕಟದ ಕಾಲದಲ್ಲಿ ಅಲ್ಲಾಹನ ಸಂದೇಶವಾಹಕರಾಗಿ, ಇಸ್ಲಾಮ್ ಎಂಬ ಸಮಗ್ರ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿದರು. ಅವರ ಜನ್ಮದಿನವನ್ನು ಈದ್‌ಮಿಲಾದ್ ಹೆಸರಿನಲ್ಲಿ ಪ್ರವಾದಿ ಸಂದೇಶಗಳನ್ನು ಸಾರಲು ವಿನಿಯೋಗಿಸಲಾಗುತ್ತದೆ ಎಂದು ತಿಳಿಸಿದರು.
ಪ್ರವಾದಿ ಮುಹಮ್ಮದ್‌ರು ಮಾನವರಿಗೆ ಮಾತ್ರ ಅನುಗ್ರಹವಲ್ಲ. ಪ್ರಾಣಿ- ಪಕ್ಷಿಗಳಿಗೂ, ಸಸ್ಯ- ಲತಾದಿಗಳಿಗೂ ಅನುಗ್ರಹವಾಗಿದ್ದಾರೆ. ಪ್ರೀತಿ, ಮಮತೆ ಮತ್ತು ಶಾಂತಿಯ ಸಂದೇಶಗಳ ಮೂಲಕ ಒಂದು ಸಮಗ್ರ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿ, ಅದನ್ನು ಇಡೀ ಜಗತ್ತಿಗೆ ಪಸರಿಸಿರುವ ಅದ್ಭುತ ಸಂತನಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ಖಾಸೀಂ ಮಾತನಾಡಿ ಪ್ರವಾದಿ ಮುಹಮ್ಮದ್‌ರ ಜನ್ಮದಿನವನ್ನು ಏಳೆಂಟು ವರ್ಷಗಳಿಂದ ಸಾಮಾಜಿಕ ಸೇವೆ ಸಲ್ಲಿಸುವ ಮೂಲಕ ಆಚರಿಸಲಾಗುತ್ತಿದೆ. ಅದರಂತೆ ಇಂದು ಕೂಡಾ ಜಿಲ್ಲಾಸ್ಪತ್ರೆ, ಹೆರಿಗೆ ಆಸ್ಪತ್ರೆ, ವೃದ್ದಾಶ್ರಮ ಹಾಗೂ ಆಶಾಕಿರಣ ಶಾಲೆಗಳಿಗೂ ಹಣ್ಣು ವಿತರಿಸುವ ಮೂಲಕ ಆಚರಿಸಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಸಲ್ಮಾನ್, ಮುಖಂಡರಾದ ತಬ್ರೇಜ್, ಆಜಾದ್, ಸಮೀರ್‌ಶೆಟ್, ಅಕ್ಬರ್ ಷರೀಫ್, ವಾಸೀಮ್ ಅಕ್ರಮ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net