

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಹವಾಮಾನ ವೈಪರೀತ್ಯ, ಮಣ್ಣಿನ ಫಲವತ್ತತೆ ನೋಡಿಕೊಂಡು ಮೌಲ್ಯವರ್ಧಿತ ಬೆಳೆಗಳನ್ನು ಬೆಳೆಸಬೇಕು. ಕೇವಲ ಕೂಲಿ ಕಾರ್ಮಿಕರನ್ನು ನೆಚ್ಚಿಕೊಳ್ಳದೆ ಮನೆಯವರು ಕೂಡ ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಾಗ ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸಿಕೊಳ್ಳಬಹುದು ಎಂದು ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ಉಪನ್ಯಾಸಕ ಪ್ರೊ.ವಿನಾಯಕ ಕೆ.ಎಸ್. ಹೇಳಿದರು.
ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಹಣ್ಣಿನ ಬೆಳೆಯಲ್ಲಿ ಸುಧಾರಿತ ಕ್ರಮ’ ವಿಷಯದ ಕುರಿತು ಮಾತನಾಡಿದರು.
ಹಲಸು, ಮಾವು, ಡ್ರಾೃಗನ್, ಲಿಂಬು, ಪಪ್ಪಾಯ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಗಳಾಗಿದ್ದು ರೈತ ಸೂಕ್ತ ಮಾರುಕಟ್ಟೆ ನೋಡಿಕೊಂಡು ಅವುಗಳನ್ನು ಮಾರಾಟ ಮಾಡಿ ಲಾಭಗಳಿಸಬಹುದು ಎಂದರು.
ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿಯಲ್ಲಿ ಸುಧಾರಿತ ಬೆಳೆಗಳು ಹಾಗೂ ತಂತ್ರಜ್ಞಾನದ ಬಳಕೆ ಆಗಬೇಕು. ಕೃಷಿ ಬಗ್ಗೆ ರೈತರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಮಾಹಿತಿ ಸಿಗಬೇಕು ಎಂದರು.
ಕೃಷಿ ವಿಚಾರ ವಿನಿಮಯ ಕೇಂದ್ರದ ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಮಾತನಾಡಿದರು. ಧಾರವಾಡಕ್ಕೆ ವರ್ಗಾವಣೆಯಾದ ತೋಟಗಾರಿಕೆ ಅಧಿಕಾರಿ ಯುಗೇಂದ್ರ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಕೃಷಿಕ ಧನಕೀರ್ತಿ ಬಲಿಪ ಸನ್ಮಾನ ಪತ್ರ ವಾಚಿಸಿದರು.
ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್, ರೈತಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಅಧ್ಯಕ್ಷ ಲಿಯೋ ವಾಲ್ಟರ್ ನಜ್ರೆತ್ ಉಪಸ್ಥಿತರಿದ್ದರು. ಸದಾನಂದ ನಾರಾವಿ ನಿರೂಪಿಸಿದರು. ಸಂದೀಪ್ ವಂದಿಸಿದರು.
ಮೂಡುಬಿದಿರೆಯಲ್ಲೂ ಅನೇಕ ಅನನಾಸು ಕೃಷಿಕರಿದ್ದಾರೆ. ಅನನಾಸು ಹಾಗೂ ಅದರ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಮೂಡುಬಿದಿರೆಯಲ್ಲಿ ‘ಅನನಾಸು ಉಪ ಉತ್ಪನ್ನ ಕೇಂದ್ರ’ ತೆರೆಯವ ಚಿಂತನೆ ಇದೆ. ರಾಜವರ್ಮ ಬೈಲಂಗಡಿ ಮಾಜಿ ಅಧ್ಯಕ್ಷ, ಕೃಷಿ ವಿಚಾರ ವಿನಿಮಯ ಕೇಂದ್ರ