

ಕೆ.ಆರ್.ಸಾಗರ: ದಸರಾ ಹಿನ್ನೆಲೆಯಲ್ಲಿ ಬೃಂದಾವನದಲ್ಲಿರುವ ಗಾಜಿನ ಮನೆಯಲ್ಲಿ 8 ದಿನಗಳ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಇದಕ್ಕಾಗಿ ಸಿದ್ಧತೆ ಭರದಿಂದ ಸಾಗಿದೆ.
ಬೃಂದಾವನ ಪ್ರವೇಶ ದ್ವಾರದ ಎಡಭಾಗದಲ್ಲಿ ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಬರುವ 125 ಅಡಿ ಉದ್ದ ಹಾಗೂ 75 ಅಡಿ ಅಗಲದ ಗಾಜಿನ ಮನೆಯಲ್ಲಿ ಇಲಾಖೆ ಸಿಬ್ಬಂದಿ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪೆಟೋನಿಯ, ಬ್ಲೂ, ರೆಡ್, ವೈಟ್, ಸಾಲ್ವಿಯ, ವಿಂಕಾ, ಜಿನಿಯಾ, ಮಾರಿಗೊಲ್ಡ್, ಥೋರಿನಿಯಂ, ಕಾಸ್ಮಸ್ ಸೇರಿದಂತೆ ವಿವಿಧ ಜಾತಿಯ ಅಲಂಕಾರಿಗಳ ಪುಷ್ಪ ಹಾಗೂ ಅಲಂಕಾರಿಕ ಗಿಡಗಳು ಗಮನ ಸೆಳೆಯಲಿದೆ. ಪರ್ಟಿಕಲ್ ಉದ್ಯಾನವನ ಸೇರಿದಂತೆ ಗಾಜಿನ ಮನೆಯ ಪ್ರವೇಶ ದ್ವಾರ ಹಾಗೂ ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ಪ್ರತಿಮೆ ಹಾಗೂ ಆಟವಾಡುವ ಮಕ್ಕಳ ಕಲಾಕೃತಿಗಳೂ ಇರಲಿವೆ. ಬೃಂದಾವನ ವೀಕ್ಷಣೆಗೆ ಬರುವ ಪ್ರವಾಸಿಗರು ಉಚಿತ ಪ್ರವೇಶವಿರುವ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಬಹುದಾಗಿದೆ.
ಅ.7ರಂದು ಸಂಜೆ 6ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರ ಚಲುವರಾಯಸ್ವಾಮಿ, ಶಾಸಕ ರಮೇಶ ಬಂಡಿಸಿದ್ದೇಗೌಡ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾಧಿಕಾರಿ ಕುಮಾರ, ಜಿಪಂ ಸಿ.ಇ.ಒ ಶೇಖ್ ತನ್ವಿರ್ ಆಸಿಘ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಲು ಉಪಸ್ಥಿತರಿರಲಿದ್ದಾರೆ ಎಂದು ಕೆ.ಆರ್.ಸಾಗರ ತೋಟಗಾರಿಕಾ ರಾಜ್ಯವಲಯ ಹಿರಿಯ ಸಹಾಯಕ ನಿದೇರ್ಶಕಿ ಸೌಮ್ಯಾತಿಳಿಸಿದ್ದಾರೆ.
ಇದೇ ವೇಳೆ ಬೃಂದಾವನಲ್ಲಿನ ವಿಶೇಷ ದೀಪಾಲಂಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಂಕೇತಿಕವಾಗಿ ಸಚಿವರು ಚಾಲನೆ ನೀಡಲಿದ್ದು, ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫಾರೂಕ್ ಅಬು ವಿಜಯವಾಣಿಗೆ ತಿಳಿಸಿದ್ದಾರೆ.