ಫಲಪುಷ್ಪದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ: ನಗರದಲ್ಲಿ ಐದು ದಿನದ ಪ್ರದರ್ಶನ

Fruit and flower Show mandya
Published on

ಮಂಡ್ಯ: ಬೆಂಗಳೂರಿನ ಲಾಲ್‌ಬಾಗ್ ನಂತರ ಪ್ರಖ್ಯಾತಿ ಹೊಂದಿರುವ ಮಂಡ್ಯ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ಸಂಘದ ಸಹಯೋಗದಲ್ಲಿ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಐದು ದಿನ ಅಂದರೆ ಜ.26ರಿಂದ 30ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನ ನೋಡುಗರ ಗಮನಸೆಳೆಯುತ್ತಿದೆ.

ಡಿಸಿ ಕಚೇರಿ ಎದುರಿನ ಕಾವೇರಿವನ ಮತ್ತು ಭವ್ಯವನಗಳನ್ನು ಬಳಸಿಕೊಳ್ಳಲಾಗಿದೆ. ಎರಡೂ ಪಾರ್ಕ್ ಸುತ್ತಲೂ ಗ್ರೀನ್ ಮ್ಯಾಟ್‌ಗಳನ್ನು ಕಟ್ಟಲಾಗಿದೆ. ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಲು ಬರುವವರ ಮನಸ್ಸಿಗೆ ಮುದ ನೀಡುವಂತೆ ಪಾರಂಪರಿಕ ಶೈಲಿಯ ಆಕರ್ಷಕ ಸ್ವಾಗತ ಕಮಾನುಗಳು, ಮಂಟಪಗಳನ್ನು ನಿರ್ಮಿಸಲಾಗಿದೆ. 2 ಲಕ್ಷಕ್ಕೂ ಹೆಚ್ಚು ಬಗೆಯ ಹೂವುಗಳು ಹಾಗೂ 25ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಅಲಂಕಾರಿಕ ಗಿಡಗಳು ಪ್ರದರ್ಶನ, ವಿವಿಧ ವರ್ಣಗಳ 20 ಸಾವಿರಕ್ಕೂ ಹೆಚ್ಚು ಅಲಂಕಾರಿಗಳ ಹೂಕುಂಡಗಳ ಜೋಡಣೆ, ಸಿರಿಧಾನ್ಯದಲ್ಲಿ ಚಂದ್ರಯಾನ-3, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ನಿತ್ಯ ಸಚಿವ ಕೆ.ವಿ.ಶಂಕರಗೌಡ ಕಲಾಕೃತಿ ರಚನೆ ಮತ್ತು ಪ್ರದರ್ಶನ, ಎತ್ತಿನಗಾಡಿ, ಹಸು, ರೈತರ ಕಲಾಕೃತಿಗಳ ಪ್ರದರ್ಶನ, ಅಯೋಧ್ಯೆ ರಾಮಮಂದಿರ, ಶಿವಪುರ ಧ್ವಜಸತ್ಯಾಗ್ರಹ ಸೌಧ, ರಾಮಭಂಟ ಹನುಮ, ಹಿಮಾಲಯದಲ್ಲಿ ಶಿವನ ಕಲಾಕೃತಿ ಪ್ರದರ್ಶನ ಗಮನಸೆಳೆಯುತ್ತಿದೆ.

ತೋಟಗಾರಿಕೆ ಇಲಾಖೆ ಕಚೇರಿಗೆ ಆಗಮಿಸಿದ ಸಚಿವ ಎನ್.ಚಲುವರಾಯಸ್ವಾಮಿ, ವಿವಿಧ ಬಗೆಯ ಫಲಪುಷ್ಪಗಳ ಪ್ರದರ್ಶನಕ್ಕೆ ಸಂತಸ ವ್ಯಕ್ತಪಡಿಸಿದರು. ಮಹಾತ್ಮ ಗಾಂಧೀಜಿ, ರಾಮಮಂದಿರದ ವಿನ್ಯಾಸ, ರಾಮಬಂಟ ಹನುಮ, ಚಂದ್ರಯಾನ-3, ಜ್ಞಾನಪೀಠ ಪುರಸ್ಕೃತರ ಚಿತ್ರಗಳು, ಸಿರಿಧಾನ್ಯದಲ್ಲಿ ನಿರ್ಮಿಸಿರುವ ಮಂಡ್ಯ ನಿತ್ಯ ಸಚಿವ ಕೆ.ವಿ ಶಂಕರೇಗೌಡ ಅವರ ಕಲಾಕೃತಿ ಸೇರಿದಂತೆ ವೈವಿಧ್ಯಮಯ ಅಲಂಕಾರಿಕ ಹೂಕುಂಡಗಳನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು. ಅನ್ನದಾನದ ಪ್ರತಿಮೆ ಎದುರು ನಿಂತು ಫೋಟೋ ತೆಗೆಸಿಕೊಂಡರು.

ಇದೇ ವೇಳೆ ಅಲಂಕಾರಿಗಳ ಮೀನುಗಳ ನೀರಿನ ತೊಟ್ಟಿಗೆ ಗಾಜಿನ ಬೌಲ್‌ಗಳಿಂದ ನೀರು ಸುರಿಯುವ ಮೂಲಕ ಸಚಿವ ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಕ್ವೇರಿಯಂ ಹಾಗೂ ಅಲಂಕಾರಿಕ ಮೀನುಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ರೂಪಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net