ಜನರ ಚಿತ್ತ ಫಲಪುಷ್ಪ ಪ್ರದರ್ಶನದತ್ತ

CTD 10 PALA-PUSHPA -05
Published on

ಕೆ.ಎಸ್.ಪ್ರಣವ್‌ಕುಮಾರ್ ಚಿತ್ರದುರ್ಗ

ಆಕರ್ಷಕವಾಗಿ ತಯಾರಿಸಲಾಗಿದ್ದ ಕಾಂತಾರಾ ಚಿತ್ರದ ಪಂಜೂರ್ಲಿ ದೈವ, ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಒಳಗೊಂಡ ಗಂಧದ ಗುಡಿ, ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಲಾಕೃತಿ ಮಾದರಿಗಳು ಗಮನ ಸೆಳೆದವು. ಜತೆಗೆ ಫಲಪುಷ್ಪಗಳ ರಂಗವಲ್ಲಿ ಕೈ ಬೀಸಿ ಕರೆದವು....

ಈ ಸುಂದರ ದೃಶ್ಯ ಕಂಡುಬಂದಿದ್ದು ತೋಟಗಾರಿಕೆ ಇಲಾಖೆಯ ಅಂಗಳದಲ್ಲಿ. ಇಲ್ಲಿ ಫೆ.12ರವರೆಗೂ ‘ಫಲಪುಷ್ಪ ಪ್ರದರ್ಶನ’ ಆಯೋಜಿಸಲಾಗಿದ್ದು, ವಿವಿಧ ಬಗೆಯ ಪುಷ್ಪಗಳು, ತರಹೇವಾರಿ ಹಣ್ಣುಗಳು, ವಿದ್ಯುದ್ದೀಪಾಲಂಕಾರ ನೋಡುಗರ ಗಮನಸೆಳೆದು ಮನಸೂರೆಗೊಳಿಸಿತು.

ತ್ರಿವರ್ಣ ಧ್ವಜವಾದ ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಬಾವುಟದ ಮಾದರಿ ಚಿತ್ರಿಸಿದ್ದ ಆಕರ್ಷಣೀಯವಾಗಿತ್ತು. ಸ್ವಾತಂತ್ರೃ ಹೋರಾಟಗಾರರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳು ಕಂಗೊಳಿಸಿದವು.

ಅಲಂಕಾರಿಕ ವಿವಿಧ ಹೂ ಕುಂಡಗಳನ್ನು ಸಾಲಾಗಿ ಜೋಡಿಸಲಾಗಿತ್ತು. ಪ್ರದರ್ಶನದಲ್ಲಿ ಕೃಷಿ ಮತ್ತು ತೋಟಗಾರಿಕೆ ಪರಿಕರಗಳ ಪ್ರದರ್ಶನ, ವಿವಿಧ ನರ್ಸರಿ ಗಿಡಗಳ ಮಾರಾಟ ಮಳಿಗೆ, ಜಿಲ್ಲೆಯ ರೈತರು ಬೆಳೆದ ಹಲವು ಬಗೆಯ ಹಣ್ಣು, ತರಕಾರಿ ಒಳಗೊಂಡು ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡಲಾಗಿದೆ.

ಪ್ರತಿ ವರ್ಷ ಫಲಪುಷ್ಪ ಪ್ರದರ್ಶನದಲ್ಲಿ ತುಂಬಿ ತುಳುಕುತ್ತಿದ್ದ ಜನಸಂದಣಿ ಈ ಬಾರಿ ಕಂಡುಬರಲಿಲ್ಲ. ಉದ್ಘಾಟನೆ ಮೊದಲ ದಿನವಾದ ಶುಕ್ರವಾರ ನೂರಾರು ಜನ ಮಾತ್ರ ವೀಕ್ಷಿಸಲು ಮುಂದಾದರು. ಶನಿವಾರ, ಭಾನುವಾರ ವಾರಾಂತ್ಯದ ರಜೆ ದಿನವಾದ್ದರಿಂದ ವೀಕ್ಷಣೆಗೆ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.

ಉದ್ಘಾಟನೆ ಸಮಾರಂಭ:

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ, ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಸುಜಯಾ ಶಿವಪ್ರಕಾಶ್, ಸದಸ್ಯರಾದ ಲೋಕನಾಥ್, ನಾಗರಾಜ ಬೇದ್ರೆ, ಸುಜಾತಾ, ಲೀಲಾವತಿ, ಚಂದ್ರಿಕಾ, ರೀನಾ, ಸುಧಾ ಇತರರಿದ್ದರು.

ಸೆಲ್ಫಿಗೆ ಮುಗಿಬಿದ್ದ ಜನ

ಫಲಪುಷ್ಪಗಳ ನಡುವೆ ಜನರನ್ನು ಆಕರ್ಷಿಸಲು ಗಾಳಿ ಗೋಪುರ, ಉಯ್ಯಲೆ ಕಂಬ, ಗ್ರಾಮೀಣ ಸೊಗಡು, ತರಕಾರಿ ಮನೆ, ಮತದಾನ ಜಾಗೃತಿ, ಆನೆ, ಜಿರಾಫೆ ಕಲಾಕೃತಿ ತಲೆಎತ್ತಿವೆ. ತೋಟದ ಮನೆ, ಔಷಧೀಯ ಸಸ್ಯಗಳು ಸೇರಿ ಒಟ್ಟಾರೆ ಪ್ರದರ್ಶನ ಚಿಣ್ಣರಿಂದ ಹಿರಿಯರವರೆಗೂ ಮನಕ್ಕೆ ಮುದ ನೀಡುತ್ತಿದೆ. ಕಲಾಕೃತಿಗಳ ಮುಂಭಾಗ ಪುಟಾಣಿಗಳು, ಯುವಕ-ಯುವತಿಯರು ಮೊಬೈಲ್‌ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಕೆಲವರು ಪ್ರೋಫೆಷನಲ್ ಕ್ಯಾಮೆರಾಕ್ಕೂ ಫೋಸ್ ನೀಡುತ್ತ ಪುಷ್ಪಗಳೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವ ದೃಶ್ಯ ಕಂಡು ಬಂದಿತು.

ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net