10ರಿಂದ ನಗರದಲ್ಲಿ ಫಲ-ಪುಷ್ಪ ಪ್ರದರ್ಶನ

CTD 8 PUSPA-02
Published on

ಚಿತ್ರದುರ್ಗ: ಜಿಪಂ, ತೋಟಗಾರಿಕೆ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಫೆ.10ರಿಂದ 12ರವರೆಗೆ 30ನೇ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಪಂ ಸಿಇಒ ಎಂ.ಎಸ್.ದಿವಾಕರ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರನ್ನು ಸ್ವಾಬಲಂಬಿಯನ್ನಾಗಿ ಮಾಡಲು ಹಣ್ಣು, ತರಕಾರಿ, ಹೂವು ಇತ್ಯಾದಿ ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯಶಸ್ಸನ್ನು ಕಂಡಿರುವ ಪ್ರಗತಿಪರ ರೈತರಿಂದ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಏರ್ಪಡಿಸಿರುವ ಈ ಪ್ರದರ್ಶನವನ್ನು ಕೇಂದ್ರ ಸಚಿವ ಎ.ನಾರಾಯಣಅವರ ಘನ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಸಿ.ಪಾಟೀಲ್ 10ರಂದು ಸಂಜೆ 6 ಗಂಟೆಗೆ ಉದ್ಘಾಟಿಸಲಿದ್ದಾರೆ.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು ಭಾಗವಹಿಸಲಿದ್ದಾರೆ. ನಿತ್ಯ ಬೆಳಗ್ಗೆ 9ರಿಂದ ರಾತ್ರಿ 9ವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ. 12ರ ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಇರುತ್ತದೆ ಎಂದರು.

ವಿಶೇಷ ಆಕರ್ಷಣೆ

ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಪ್ರದರ್ಶನವನ್ನು ಮರು ಆರಂಭಿಸಲಾಗಿದೆ. ಶ್ರೀ ಸಿದ್ದೇಶ್ವರ ಸ್ವಾಮೀಜಿ,ದುರ್ಗದ ಐತಿಹಾಸಿಕ ಗಾಳಿ ಗೋಪುರ ಮತ್ತು ಉಯ್ಯಲೆ ಕಂಬ, ಗಂಧದ ಗುಡಿ ಹಾಗೂ ಕಾಂತಾರ ಚಿತ್ರದ ವಿವಿಧ ಕಲಾಕೃತಿಗಳು, ತರಕಾರಿ ಮನೆ, ಹಳ್ಳಿ ಸೊಗಡು, ಮತದಾನ ಜಾಗೃತಿ, ನೀತಿ ಕತೆ, ಕಾರ್ಟೂನ್ ಕಲಾಕೃತಿಗಳೊಂದಿಗೆ 50ಕ್ಕೂ ಹೆಚ್ಚು ಬಗೆಯ ವಿವಿಧ ಪುಷ್ಪಗಳು ನೋಡುಗರ ಗಮನ ಸೆಳೆಯಲಿವೆ.

ಪ್ರದರ್ಶನದ ಅಂಗವಾಗಿ ನಗರದ ಶಾಲಾ ಮಕ್ಕಳಿಗೆ ಜಾನಪದ ಹಾಗೂ ಭಾವಗೀತೆ, ಚಿತ್ರಕಲೆ, ಪ್ರಬಂಧ, ವೇಷಭೂಷಣ, ರಂಗೋಲಿ, ಚಿಕ್ಕಮಕ್ಕಳಿಗೆ ಹಣ್ಣು ಮತ್ತು ತರಕಾರಿಗಳನ್ನು ಗುರುತಿಸುವ, ತರಕಾರಿ ಕೆತ್ತನೆ, ಹೂವು ಜೋಡಣೆ ಹಾಗೂ ಬೊನ್ಸಾಯ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿಜೇತರಿಗೆ ಜಿಲ್ಲಾ ತೋಟಗಾರಿಕೆ ಸಂಘದಿಂದ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಡಿಡಿ ಜಿ.ಸವಿತಾ, ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಸುಜಯ್ ಶಿವಪ್ರಕಾಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ದೇವರಾಜು, ಲೋಕನಾಥ್ ಇದ್ದರು.

*ಗಾಜಿನ ಮನೆ ನಿರ್ಮಾಣ ಪರಿಶೀಲನೆ

ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ವಿಸ್ತೀರ್ಣ ವಿಸ್ತರಿಸಬೇಕಿದೆ. ಹಿತ್ತಲು, ಆರ್‌ಸಿಸಿಯಲ್ಲಿ ಹಣ್ಣು, ತರಕಾರಿ ಬೆಳೆಗೆ ಅವಕಾಶವಿದೆ. ಕೃಷಿ ಬೆಳೆಗಳು ಮೂರ‌್ನಾಲ್ಕು ತಿಂಗಳು ಆದಾಯ ತಂದು ಕೊಟ್ಟರೆ, ತೋಟಗಾರಿಕೆ ಬೆಳೆಗಳು ವರ್ಷವೀಡಿ ಆದಾಯದ ಮೂಲವಾಗಲಿದೆ. ನಗರದಲ್ಲಿ ಗಾಜಿನ ಮನೆ ನಿರ್ಮಾಣ ಕುರಿತು ಪರಿಶೀಲಿಸುವುದಾಗಿ ಎಂ.ಎಸ್.ದಿವಾಕರ್ ತಿಳಿಸಿದರು.

*ಇಂದು ವಿವಿಧ ಸ್ಪರ್ಧೆಗಳು

ಫೆ.9ರ ಬೆಳಗ್ಗೆ 10ಕ್ಕೆ ತೋಟಗಾರಿಕೆ ಆವರಣದಲ್ಲಿ 25 ವರ್ಷ ಮೇಲಿನ ಮಹಿಳೆಯರಿಗೆ ಮ್ಯೂಸಿಕಲ್‌ಚೇರ್, 11.30ಕ್ಕೆ ಮಡಿಕೆ ಒಡೆಯುವ, 10ರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ತರಕಾರಿ ಕೆತ್ತನೆ, ಹೂವುಗಳ ಜೋಡಣೆ, ರಂಗೋಲಿ ಸ್ಪರ್ಧೆ. 11ರ ಬೆಳೆಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ 1, 2ನೇ ತರಗತಿ ವಿದ್ಯಾರ್ಥಿಗಳಿಗೆ ಹಣ್ಣು, ತರಕಾರಿ

ಗುರುತಿಸುವ, 12ರಿಂದ 12.30ರ ವರೆಗೆ 5ರಿಂದ 7 ಮತ್ತು 8ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ವಿಭಾಗದಲ್ಲಿ ಚಿತ್ರಕಲೆ, 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2ರಿಂದ 3 ಗಂಟೆವರಗೆ, ಆಶುಭಾಷಣ, ಪ್ರಬಂಧ ಸ್ಪರ್ಧೆ. ಸಂಜೆ 6.30ಕ್ಕೆ 1ರಿಂದ 4 ತರಗತಿ ವಿದ್ಯಾರ್ಥಿಗಳಿಗೆ ಫ್ಯಾನ್ಸಿಡ್ರೆಸ್, ಸಂಜೆ 5ರಿಂದ 10 ತರಗತಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ವಿಭಾಗದಲ್ಲಿ ಜನಪದ ಮತ್ತು ಭಾವಗೀತೆ ಸ್ಪರ್ಧೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net