

ವಿಜಯಪುರ: ಜೋಳದಲ್ಲಿ ಅರಳಿದ ಮಹಾ ಮಾನವತಾವಾದಿ ಬಸವೇಶ್ವರ, ಹೂವಿನಲ್ಲಿ ಕಂಗೊಳಿಸುವ ನಂದಿ, ಅಲಂಕಾರಿಕ ಪುಷ್ಪಗಳು, ಹಚ್ಚಹಸಿರಾದ ಸಸಿಗಳ ಮಧ್ಯೆ ತಪ್ಪಸ್ಸಿಗೆ ಕುಳಿತ ಪರಮೇಶ್ವರ, ಮರದ ಕೆಳಗೆ ಧ್ಯಾನಕ್ಕೆ ಕುಳಿತುಕೊಂಡ ಬುದ್ಧ, ಪ್ರಕೃತಿ ಮಧ್ಯೆ ಮೈದಳೆದ ಶಬರಿಮಲೆ ಅಯ್ಯಪ್ಪಸ್ವಾಮಿ, ಬಗೆ ಬಗೆಯ ಹೂಗಳಲ್ಲಿ ನಗು ನಗುತಾ ಕುಳಿತಿರುವ ಸಿದ್ಧೇಶ್ವರ ಶ್ರೀಗಳು....ಅಬ್ಬಬ್ಬಾ.....ಒಂದಾ ಎರಡಾ? ನೋಡಲಿಕ್ಕೆ ಎರಡು ಕಣ್ಗಳು ಸಾಲದು....!
ನಗರದ ಹೃದಯ ಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಪಕ್ಕದ ತೋಟಗಾರಿಕೆ ಇಲಾಖೆಯ ಬಸವ ವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಲಿಂಬೆ ಅಭಿವೃದ್ಧಿ ಮಂಡಳಿ, ಹಾಪ್‌ಕಾಮ್ಸ್ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ ಮೂರು ದಿನದ ಫಲ-ಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನ ಜನರ ಕಣ್ಮನ ತಣಿಸುತ್ತಿವೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳರಿಂದ ಸೋಮವಾರ ಉದ್ಘಾಟನೆಗೊಂಡ ಈ ಪ್ರದರ್ಶನ ಹಾಗೂ ಅಭಿಯಾನದಲ್ಲಿ, 14 ಅಡಿ ಎತ್ತರದ ಹೂವಿನಿಂದ ನಿರ್ಮಾಣಗೊಂಡ ನಂದಿ ಮನಕ್ಕೆ ಮುದ ನೀಡುತ್ತಿದೆ. ಕರಿ ಹಾಗೂ ನೀಲಿಯ ದ್ರಾಕ್ಷಿಗಳಿಂದ ಅತ್ಯದ್ಭುತವಾಗಿ ನಿರ್ಮಾಣಗೊಂಡ ಗೋಳಗುಮ್ಮಟ ಅಸಲಿ ಗೋಳಗುಮ್ಮಟವನ್ನೇ ನಾಚಿಸುವಂತಿದೆ. ಜನ ಮುಗಿಬಿದ್ದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವುದನ್ನು ನೋಡಿದರೆ ಗೋಳಗುಮ್ಮಟವೂ ಮುಗುಳ್ನಗೆ ಬೀರುತ್ತಿರುವಂತೆ ಭಾಸವಾಗುತ್ತಿದೆ. ಕೆಂಪು ಮೆಣಸಿನಕಾಯಿಯಿಂದ ನಿರ್ಮಿಸಿದ ಹದ್ದು, ರಂಗು ರಂಗಿನ ಹೂವಿನಲ್ಲಿ ರೂಪುಗೊಂಡ ಚಹಾದ ಕಿಟ್ಲಿ....ಹೀಗೆ ಒಂದಕ್ಕಿಂತ ಒಂದು ಚೆಂದದ ಆಕೃತಿಗಳು ಮನಸ್ಸಿಗೆ ಮುದ ನೀಡುತ್ತಿವೆ.
ಪ್ರತಿ ವರ್ಷಕ್ಕಿಂತ ಈ ಬಾರಿ ಪುಷ್ಪ ಮೇಳ ಅದ್ದೂರಿಯಾಗಿ ಆಯೋಜಿಸಲಾಗಿದ್ದು ಸಂಕ್ರಮಣದ ಸುಸಂದರ್ಭದಲ್ಲಿ ಪ್ರವಾಸಿಗರನ್ನು, ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ. ಜಾತ್ರೆಗೆ ಬಂದ ಜನ ಪುಷ್ಪ ಪ್ರದರ್ಶನ ಕಣ್ತುಂಬಿಕೊಂಡು ಹೋಗುತ್ತಿದ್ದಾರೆ.
ಪ್ರವೇಶ ದ್ವಾರದಲ್ಲಿಯೇ ನಿರ್ಮಿಸಿರುವ ಬಣ್ಣ ಬಣ್ಣದ ಹೂವುಗಳ ಅಲಂಕಾರ ನೋಡುಗರ ಮನ ರಂಗಾಗಿಸುತ್ತಿದೆ. ಹಣ್ಣು, ತರಕಾರಿ, ಕಾಯಿಪಲ್ಯೆ ಬಳಸಿ ನಿರ್ಮಿಸಿದ ಮಹಾತ್ಮರ ಮೂರ್ತಿಗಳು ಭಕ್ತಿ ಭಾವ ಹೆಚ್ಚಿಸುತ್ತಿವೆ. ತೋಟಗಾರಿಕೆ ಇಲಾಖೆಯ ಇಕ್ಕೆಲಗಳ ವಿಶಾಲ ಉದ್ಯಾನದಲ್ಲಿ ನಿರ್ಮಾಣಗೊಂಡಿರುವ ವಿವಿಧ ಮಳಿಗೆಗಳು, ಅಲಂಕಾರಿಕ ಸಸಿಗಳು, ಹಣ್ಣು-ಹಂಪಲುಗಳು, ಪುಷ್ಪಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ. ಪ್ರಕೃತಿಯನ್ನೇ ಪ್ರವಚನದ ಸಾರವನ್ನಾಗಿಸಿಕೊಂಡು ತತ್ವಜ್ಞಾನವನ್ನು ಸರಳವಾಗಿ ಉಣಬಡಿಸುತ್ತಿದ್ದ ಪರಮ ಪೂಜ್ಯ ಸಿದ್ಧೇಶ್ವರ ಶ್ರೀಗಳು ದೈಹಿಕವಾಗಿ ಅಗಲಿದರೂ ಪುಷ್ಪಲೋಕದಲ್ಲಿ ಅರಳಿ ನಿಂತಿದ್ದಾರೆ.
ಮೀನುಗಾರಿಕೆ ಇಲಾಖೆಯಿಂದ ಸ್ಥಾಪಿಸಿದ ಮಳಿಗೆಯಲ್ಲಿ ಮತ್ಸೃಲೋಕವೇ ಸೃಷ್ಠಿಯಾಗಿದೆ. ಅಲಂಕಾರಿಕ ಮೀನಿನ ತೊಟ್ಟಿಯಲ್ಲಿ 18 ವಿವಿಧ ತಳಿಯ ದೇಶಿ ಹಾಗೂ ವಿದೇಶಿ ತಳಿಯ ಅಲಂಕಾರಿಕ ಮೀನುಗಳನ್ನು ಪ್ರದರ್ಶಿಸಲಾಗುತ್ತಿದ್ದು, ಜನ ಮೀನುಗಳನ್ನು ನೋಡಲು ಮುಗಿ ಬೀಳುವುದರ ಜೊತೆಗೆ ಮತ್ಸೊೃೀದ್ಯಮಕ್ಕೆ ಸಂಬಂಧಿಸಿದ ಮಾಹಿತಿ ಪಡೆಯುತ್ತಿರುವುದು ಮೇಳದ ಅರ್ಥಪೂರ್ಣತೆ ಹೆಚ್ಚಿಸಿದೆ.