

ಶಿರಸಿ: ಜಿಲ್ಲೆಯಲ್ಲಿ ಪುಷ್ಪ ಕೃಷಿ ಉತ್ತೇಜಿಸುವ ಹಾಗೂ ತೋಟಗಾರಿಕೆ ಮಹತ್ವದ ಬಗ್ಗೆ ರೈತ ಸಮುದಾಯ, ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಹಮ್ಮಿಕೊಳ್ಳಲಾಗುವ ಫಲಪುಷ್ಪ ಪ್ರದರ್ಶನ ಮತ್ತು ಸಾವಯವ ಸಿರಿಧಾನ್ಯ ಮೇಳವನ್ನು ಈ ವರ್ಷ ಮಾ. 1ರಿಂದ 3ರವರೆಗೆ ನಡೆಯಲಿದೆ.
ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಬಿ.ಪಿ. ಸತೀಶ, ವಿವಿಧ ಯೋಜನೆಗಳಡಿ ಲಭ್ಯವಿರುವ 13.19 ಲಕ್ಷ ರೂ. ಅನುದಾನ ಬಳಸಿಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಫಲಪುಷ್ಪ ಪ್ರದರ್ಶನಕ್ಕಾಗಿ ಎಂಟಿರಿಯಂ, ಡಯಾಂತಸ್, ಇಂಪೆಶನ್ಸ್, ವಿವಿಧ ಜಾತಿಯ ಹೂವಿನ ಗಿಡಗಳನ್ನು ಒಳಗೊಂಡಂತೆ ಸುಮಾರು 15 ಸಾವಿರ ಹೂವಿನ ಗಿಡಗಳನ್ನು ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಬೆಳೆಸಲಾಗಿದೆ. ಪುಷ್ಪಗಳಿಂದ ನಂದಿ- ಈಶ್ವರ ಲಿಂಗದ ಮಾದರಿಯಲ್ಲಿ ಕಲಾಕೃತಿ ರಚಿಸಲಾಗುತ್ತಿದೆ. ಸಿರಿಧಾನ್ಯಗಳಿಂದ ರಚಿಸಿದ ಚೆಸ್ ಪಾಕ, ಸಾವಯವ ಸಿರಿಧಾನ್ಯ ಮಳಿಗೆಗಳು, ದಿ. ತುಳಸಿ ಗೌಡ, ಸುಕ್ರಿ ಗೌಡ ಮತ್ತು ಕುಂಬಮೇಳವನ್ನು ಬಿಂಬಿಸುವ ಪುಷ್ಪ ರಂಗೋಲಿಗಳು, ಬಾಳೆಯಿಂದ ತಯಾರಿಸಿ ಖಾದ್ಯಗಳ ಸ್ಪರ್ಧೆ, ತೋಟಗಾರಿಕೆ ಬೆಳೆಗಳ ಸ್ಥಳೀಯ ತಳಿ, ವಿಶೇಷ ತಳಿಗಳ ಪ್ರದರ್ಶಿಕೆಗಳು, ವಿವಿಧ ವಿನ್ಯಾಸಗಳಲ್ಲಿ ಹೂ ಕುಂಡಗಳ ಜೋಡಣೆ ಈ ವರ್ಷದ ವಿಶೇಷ ಆಕರ್ಷಣೆ ಆಗಲಿವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಆರ್.ವಿ. ದೇಶಪಾಂಡೆ, ಸತೀಶ ಸೈಲ್, ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ್, ದಿನಕರ ಶೆಟ್ಟಿ, ಎಸ್.ವಿ. ಸಂಕನೂರು, ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ ಇತರರು ಪಾಲ್ಗೊಳ್ಳಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರಲಿದ್ದಾರೆ ಎಂದರು.
ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ, ಸತೀಶ ಹೆಗಡೆ, ಗಣೇಶ ಹೆಗಡೆ ಇತರರಿದ್ದರು.