

ಶಿರಸಿ: ನಕಲಿ ಬಂಗಾರ ನೀಡಿ ವಂಚನೆ ಮಾಡಿದ ಆರೋಪಿಯನ್ನು ಬಂಧಿಸಿ, ಆತನಿಂದ 4.50 ಲಕ್ಷ ರೂ. ವಶಪಡಿಸಿಕೊಳ್ಳುವಲ್ಲಿ ಬನವಾಸಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆನವಟ್ಟಿಯ ಕೊರಚರ ಬೀದಿಯ ಕೊಟ್ರಪ್ಪ ದುರ್ಗಪ್ಪ ಕೊರಚರ (64) ಬಂಧಿತ. ಕುಮಟಾ ತಾಲೂಕಿನ ಮಾರುತಿ ನಾಯ್ಕ ಮತ್ತು ಸುಂದರ್ ನಾರಾಯಣ ನಾಯ್ಕ ಎಂಬುವವರಿಂದ 4.50 ಲಕ್ಷ ರೂ. ತೆಗೆದುಕೊಂಡು 240 ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚಿಸಿದ ಬಗ್ಗೆ ಬನವಾಸಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಹಿಂದೆ ಬಿದ್ದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಧರ್ಮಸ್ಥಳದಲ್ಲಿ ಮಾರುತಿ ನಾಯ್ಕ ಅವರಿಗೆ ಪರಿಚಯವಾಗಿದ್ದ ಕೊಟ್ರಪ್ಪ ಒಳ್ಳೆಯ ವ್ಯಕ್ತಿಯಂತೆ ನಂಬಿಕೆ ಬರುವಂತೆ ನಟಿಸಿ, ಅ.14 ರಂದು ಬಂಗಾರದ ನಾಣ್ಯ ಮಾರಾಟ ಮಾಡಿದ್ದ. ಸಾಗರದ ಉಳವಿಯಲ್ಲಿ ಅಸಲಿ ಬಂಗಾರದ ಒಂದು ನಾಣ್ಯವನ್ನು ಪಡೆದುಕೊಂಡು ಅದನ್ನು ತೋರಿಸಿ ಉಳಿದ ನಕಲಿ ನಾಣ್ಯ ಮಾರಾಟ ಮಾಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಶಿರಸಿ ಸಬ್ ರಿಜಿಸ್ಟ್ರಾರ್ ಲೋಕಾಯುಕ್ತ ಬಲೆಗೆ