

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ಜು.18ರಂದು ಬೆಳಗ್ಗೆ 11.30ಕ್ಕೆ ವಿವಿಯ 24ನೇ ವಾರ್ಷಿಕ ಘಟಿಕೋತ್ಸವ ಆಯೋಜಿಸಲಾಗಿದೆ ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ ಉಪಸ್ಥಿತರಿರುವರು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರದ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಸದ್ಗುರು ಮಧುಸೂದನ್ ಸಾಯಿ, ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್, ಬೆಂಗಳೂರಿನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರಿ ಕೆ. ಮರಾರ್ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಲಾಗುವುದು ಎಂದರು.
ಘಟಿಕೋತ್ಸವದಲ್ಲಿ ಒಟ್ಟು 52,615 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಈ ಪೈಕಿ 51,084 ಬಿಇ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. 51,084 ವಿದ್ಯಾರ್ಥಿಗಳಲ್ಲಿ ಸ್ವಾಯತ್ತ ಮಹಾವಿದ್ಯಾಲಯದ 15,387 ವಿದ್ಯಾರ್ಥಿಗಳಿದ್ದಾರೆ. ಇನ್ನು ಬಿ.ಟೆಕ್‌ನ 45 ವಿದ್ಯಾರ್ಥಿಗಳು, ಬಿ.ಪ್ಲಾನ್ 8 ವಿದ್ಯಾರ್ಥಿಗಳು, ಬಿ.ಆರ್ಕ್‌ನ 1,138 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. 1,138 ವಿದ್ಯಾರ್ಥಿಗಳ ಪೈಕಿ ಸ್ವಾಯತ್ತ ಮಹಾವಿದ್ಯಾಲಯದ 169 ವಿದ್ಯಾರ್ಥಿಗಳಿದ್ದಾರೆ. 40 ವಿದ್ಯಾರ್ಥಿಗಳಿಗೂ ಸಂಶೋಧನಾ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಬಿ.ಇ. ಪರೀಕ್ಷೆ ಎದುರಿಸಿದವರಲ್ಲಿ ಶೇ.79.40 ಯುವಕರು, ಶೇ 95.62 ಯುವತಿಯರು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಉತ್ತೀರ್ಣತೆಯ ಪ್ರಮಾಣ ಶೇ.82.97 ಇತ್ತು. ಈ ಬಾರಿ ಶೇ 85.83ಕ್ಕೇರಿದೆ. ಕಳೆದ ಬಾರಿ ಎಸ್ಸಿ/ಎಸ್ಟಿ ಶೇ 53.59 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಆ ಪ್ರಮಾಣ ಶೇ.74.55ಕ್ಕೇರಿದೆ ಎಂದರು. ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ ಸುದ್ದಿಗೋಷ್ಠಿಯಲ್ಲಿದ್ದರು.
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಎಂ.ಎಸ್.ಶೇಷಗಿರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಸಾಹಿಲ್ ಸೋಮನಾಚೆ 12 ಚಿನ್ನದ ಪದಕ ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ. ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಜಿ. ವಿಷ್ಣುಪ್ರಿಯಾ 10, ಬೆಂಗಳೂರಿನ ಎಸ್‌ಜೆಬಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ಸ್ ವಿಭಾಗದ ಜಿ.ರೇಷ್ಮಾ, ಅದೇ ಕಾಲೇಜಿನ ಮೆಕಾನಿಕಲ್ ವಿಭಾಗದ ಎಲ್.ಮೋಹನಕುಮಾರ್, ಬಳ್ಳಾರಿಯ ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಜಿ.ಹೃತಿಕಾ ಅವರು ತಲಾ ಏಳು ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರು ಆನಂದ ನಗರದ ಅತ್ರೀಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕೃತಿಕಾ ಸೆಂಥಿಲ್, ಆರ್‌ಎನ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅನುಶ್ರೀ ಪಿ. ತಲಾ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ.
ಕೆಜಿಎಫ್‌ನ ಡಾ.ಟಿ.ತಿಮ್ಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಲತೇಶ ಎನ್., ದಾವಣಗೆರೆಯ ಜಿ.ಎಂ.ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಜನನಿ ಡಿ., ಮಂಗಳೂರಿನ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸೌರವ್ ವಿ. ಇಂಗಳೆ ಅವರು ತಲಾ 2 ಚಿನ್ನದ ಪದಕ ಪಡೆದಿದ್ದಾರೆ ಎಂದು ವಿವರಿಸಿದರು.