

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಸೆ.29ರಿಂದ ಅ.2ರವರೆಗೆ ರಾಜ್ಯಮಟ್ಟದ ‘ದಸರಾ ಮುಖ್ಯಮಂತ್ರಿ ಕಪ್’ ಕ್ರೀಡಾಕೂಟ ಆಯೋಜಿಸಲಾಗಿದೆ.
ಸೆ.29 ರಂದು ಸಂಜೆ 4.30 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲ್ಲಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ತನ್ವೀರ್ ಸೇಠ್, ಮೇಯರ್ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಡಾ.ಕೆ.ಗೋವಿಂದರಾಜ್ ಭಾಗವಹಿಸಲಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
27 ಕ್ರೀಡೆಗಳು: ಸೆ.29ರಿಂದ ಅ.2 ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣ, ಡಿ.ದೇವರಾಜ ಅರಸು ಕುಸ್ತಿ ಅಖಾಡ, ಮೈಸೂರು ವಿಶ್ವವಿದ್ಯಾಲಯದ ವಿವಿಧ ಕ್ರೀಡಾಂಗಣ ಸೇರಿದಂತೆ ನಗರದ ನಾನಾ ಕಡೆ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಕಬಡ್ಡಿ, ಖೋ-ಖೋ, ಈಜು, ವಾಲಿಬಾಲ್, ಥ್ರೋಬಾಲ್, ಹ್ಯಾಂಡ್‌ಬಾಲ್, ಭಾರ ಎತ್ತುವುದು, ಚೆಸ್, ದೇಹದಾರ್ಢ್ಯ, ಬಾಕ್ಸಿಂಗ್ ಪಂದ್ಯಾವಳಿ ನಡೆಯಲಿವೆ. ಎನ್‌ಐಇ ಕಾಲೇಜು ಮೈದಾನದಲ್ಲಿ ಬಾಲ್ ಬ್ಯಾಡ್ಮಿಂಟನ್, ಕುಸ್ತಿ, ಟೆನಿಸ್, ಶೂಟಿಂಗ್, ಯೋಗ, ನೆಟ್‌ಬಾಲ್, ಆರ್ಚರಿ, ವುಶು, ಟೇಬಲ್ ಟೆನಿಸ್ ಸೇರಿದಂತೆ ಒಟ್ಟು 27 ಕ್ರೀಡೆಗಳು ನಡೆಯಲಿವೆ. 2019ರಲ್ಲಿ 25 ಕ್ರೀಡೆಗಳನ್ನು ನಡೆಸಲಾಗಿತ್ತು ಎಂದರು.
ಯೋಗ, ಶೂಟಿಂಗ್:
ದಸರಾ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಯೋಗ ಮತ್ತು ಶೂಟಿಂಗ್ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಆದರೆ, ತಾಂತ್ರಿಕ ಕಾರಣದಿಂದ ಹಾಫ್ ಮ್ಯಾರಾಥಾನ್ ಸ್ಪರ್ಧೆಯನ್ನು ಕೈಬಿಡಲಾಗಿದೆ. ಮೈಸೂರು, ಬೆಂಗಳೂರು ನಗರ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಹಾಗೂ ಕಲಬುರಗಿ ವಿಭಾಗಗಳಿಂದ ಸುಮಾರು 5 ಸಾವಿರ ಕ್ರೀಡಾಪಟುಗಳು ಹಾಗೂ 500 ತಾಂತ್ರಿಕ ಸಿಬ್ಬಂದಿ ಭಾಗವಹಿಸಲಿದ್ದಾರೆ. ಎಲ್ಲ ಕ್ರೀಡಾಪಟುಗಳಿಗೂ ವಸತಿ, ಊಟೋಪಹಾರ, ಸಾರಿಗೆ, ವೈದ್ಯಕೀಯ ವ್ಯವಸ್ಥೆ ನೀಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.
ನಗದು ಬಹುಮಾನ ಹೆಚ್ಚಳ:
ಈ ಬಾರಿ ಗುಂಪು ಕ್ರೀಡೆಗಳ ನಗದು ಬಹುಮಾನ ಹೆಚ್ಚಿಸಲಾಗಿದೆ. ಟೇಬಲ್ ಟೆನಿಸ್, ಟೆನಿಸ್, ಬ್ಮಾಡ್ಮಿಂಟನ್ ಸ್ಪರ್ಧೆಗಳ ಪ್ರಥಮ ಬಹುಮಾನ ಪಡೆದ ತಂಡದ ಸದಸ್ಯರಿಗೆ ತಲಾ 4 ಸಾವಿರ (ಕಳೆದ ಬಾರಿ 2 ಸಾವಿರ) ರೂ., ದ್ವಿತೀಯ ಬಹುಮಾನ ಪಡೆದ ತಂಡದ ಸದಸ್ಯರಿಗೆ ತಲಾ 3 ಸಾವಿರ ರೂ.( ಕಳೆದ ಬಾರಿ 1500 ರೂ.), ತೃತೀಯ ಬಹುಮಾನ ಪಡೆದ ತಂಡದ ಸದಸ್ಯರಿಗೆ ತಲಾ 2 ಸಾವಿರ ರೂ.(1000 ರೂ.) ನೀಡಲಾಗುವುದು. ಉಳಿದ ಗುಂಪು ಕ್ರೀಡೆಗಳ ಪ್ರಥಮ ಸ್ಥಾನಕ್ಕೆ 3 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 2 ಸಾವಿರ ರೂ. ಹಾಗೂ ತೃತೀಯ ಸ್ಥಾನಕ್ಕೆ 1500 ರೂ. ನೀಡಲಾಗುವುದು ಎಂದು ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ ನೀಡಿದರು.
ಕ್ರೀಡಾಕೂಟದ ವೈಯಕ್ತಿಕ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ 8 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 5 ಸಾವಿರ ರೂ., ತೃತೀಯ ಸ್ಥಾನಕ್ಕೆ 2.5 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ. ನೂತನ ದಾಖಲೆ ನಿರ್ಮಿಸಿದವರಿಗೆ ನೀಡಲಾಗುತ್ತಿದ್ದ ನಗದು ಬಹುಮಾನವನ್ನು 10 ಸಾವಿರದಿಂದ 20 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ ಎಂದರು.
ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೆ ಬಜಾಜ್ ಅಲೈಯನ್ಸ್ ಸಂಸ್ಥೆ ವತಿಯಿಂದ ಜೀವವಿಮೆ ಮಾಡಿಸಲಾಗುತ್ತದೆ. ಈಗಾಗಲೇ 7 ಲಕ್ಷ ರೂ. ಪ್ರೀಮಿಯಂ ಹಣ ಪಾವತಿಸಲಾಗಿದೆ. ಮರಣ ಸಂಭವಿಸಿದಲ್ಲಿ 3 ಲಕ್ಷ ರೂ., ಶಾಶ್ವತ ಅಂಗವೈಕಲ್ಯಕ್ಕೆ 3 ಲಕ್ಷ ರೂ. ಹಾಗೂ ಗಾಯಗೊಂಡರೆ ವೈದ್ಯಕೀಯ ಚಿಕಿತ್ಸೆಗೂ 3 ಲಕ್ಷ ರೂ.ವರೆಗೆ ಪರಿಹಾರ ಪಡೆಯಬಹುದಾಗಿದೆ ಎಂದು ಹೇಳಿದರು.
ಜಲಸಾಹಸ ಕ್ರೀಡೆ:
ದಸರಾ ಕ್ರೀಡಾ ಉಪ ಸಮಿತಿ ವಿಶೇಷಾಧಿಕಾರಿ ಆರ್.ಚೇತನ್ ಮಾತನಾಡಿ, ಯುವ ಪೀಳಿಗೆಯಲ್ಲಿ ಆತ್ಮವಿಶ್ವಾಸ ಮತ್ತು ಸಾಹಸ ಪ್ರವೃತ್ತಿ ಬೆಳೆಸುವ ದೃಷ್ಟಿಯಿಂದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಸೆ.29 ರಿಂದ ಅ.2 ರವರೆಗೆ ಕೆಆರ್‌ಎಸ್ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆ. ಜತೆಗೆ, ಅಂಧರ ಚೆಸ್, ಬಾಡಿ ಬಿಲ್ಡಿಂಗ್, ಕರಾಟೆ, ಸೈಕಲ್ ಪೋಲೋ ಹಾಗೂ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
ದಸರಾ ಕ್ರೀಡಾ ಉಪ ಸಮಿತಿ ಅಧ್ಯಕ್ಷ ಶಿವಾನಂದ, ಉಪಾಧ್ಯಕ್ಷರಾದ ಇ.ರಮೇಶ್, ರವಿ, ವಿಜಯಕುಮಾರ್ ಇತರರಿದ್ದರು.