

ಸಂಡೂರು: ಪಟ್ಟಣದ ಎಸ್‌ಇಎಸ್ ವಿದ್ಯಾಮಂದಿರದಲ್ಲಿ ನ.24, 25 ಮತ್ತು 26ರಂದು ವಿವೇಕ ಮಂಟಪ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ತಾಲೂಕು ಅಧ್ಯಕ್ಷ ಬಿ.ನಾಗನಗೌಡ ತಿಳಿಸಿದರು. ಪಟ್ಟಣದ ಬಿಕೆಜಿ ಕಚೇರಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಹಾಗೂ ಬದುಕಿನ ಅನೇಕ ಅಂಶಗಳ ಕುರಿತು ಗದಗ ಮತ್ತು ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಉಪನ್ಯಾಸ ನೀಡಲಿದ್ದಾರೆ. ವಿಕಾಸ ಅಕಾಡೆಮಿಯ ಗೌರಹ ಸಲಹೆಗಾರ ಬಸವರಾಜ ಮಸೂತಿ, ಸಿ.ಎಂ.ಶಿಗ್ಗಾಂವಿ, ಜಿಲ್ಲಾ ಸಂಯೋಜಕ ಪ್ರವೀಣ್ ನಾಯಕ್, ತಾಲೂಕು ಸಂಚಾಲಕ ಕರಡಿ ಯರ‌್ರಿಸ್ವಾಮಿ, ಸಹ ಸಂಚಾಲಕ ಕುಮಾರಸ್ವಾಮಿ ಮೇಟಿ, ಸಲಹೆಗಾರ ಜಿ.ವೀರೇಶ, ಸದಸ್ಯರಾದ ಷಣ್ಮುಖರಾವ್, ಜ್ಞಾನ ಭಾರತಿ ಕುಮಾರಸ್ವಾಮಿ, ಶಂಕರ್ ಯಾದವ್, ಶ್ರೀನಿವಾಸ್ ಇದ್ದರು. ಕಂಪ್ಲಿ: ಇಲ್ಲಿನ ಬಿಎಸ್‌ವಿ ಶಾಲೆ ಆವರಣದಲ್ಲಿ ನ.27ರಿಂದ ಮೂರು ದಿನ ವಿವೇಕ ಮಂಟಪ ಉಪನ್ಯಾಸ ಮಾಲಿಕೆ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ಜಿಲ್ಲಾ ಸಂಯೋಜಕ ಪ್ರಭುದೇವ ಕಪ್ಪಗಲ್ಲು ತಿಳಿಸಿದರು. ಇಲ್ಲಿನ ಅತಿಥಿಗೃಹ ಆವರಣದಲ್ಲಿ ಶನಿವಾರ ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ಸಭೆಯಲ್ಲಿ ಮಾತನಾಡಿದರು. ಪ್ರತಿ ಸಂಜೆ 6ಗಂಟೆಗೆ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಉಪನ್ಯಾಸ ನೀಡಲಿದ್ದಾರೆ. 2025ರ ಜ.28ರಿಂದ ಫೆ.6ರತನಕ ಸೇಡಂನಲ್ಲಿ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಅಕಾಡೆಮಿ ತಾಲೂಕು ಸಂಚಾಲಕ ಅಮರೇಗೌಡ ಚಿಕ್ಕಜಾಯಿಗನೂರು ಮಾತನಾಡಿ, ವಿದ್ಯಾರ್ಥಿಗಳು, ಯುವಜನತೆಯಲ್ಲಿ ದೇಶಪ್ರೇಮ, ಮಾನವೀಯ ಮೌಲ್ಯಗಳ ಕುರಿತು ಜಾಗೃತಿ ಮೂಡಿಸಲು ಮೂರು ದಿನ ಪ್ರವಚನದೊಂದಿಗೆ, ಶಾಲೆ ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಹ ಸಂಚಾಲಕ ಕೆ.ರಂಗಪ್ಪ ಇತರರಿದ್ದರು.