

ಸಂಕೇಶ್ವರ: ಸಮೀಪದ ನಿಡಸೋಸಿ ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದಲ್ಲಿ ತ್ರಿವಿಧ ದಾಸೋಹಿ ಜಗದ್ಗುರು ಪಂಚಮ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ಹಾಗೂ ಉತ್ತರಾಽಕಾರಿ ನಿಜಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಆ.೩೧ರಿಂದ ಮಹಾದಾಸೋಹ ಮಹೋತ್ಸವ ಜರುಗಲಿದೆ.
ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ ಸೇರಿ ಗಡಿಭಾಗದಲ್ಲಿ ೩ ಶತಮಾನಗಳ ಭವ್ಯ ಪರಂಪರೆ ಹೊಂದಿರುವ ಶ್ರೀಮಠದಲ್ಲಿ ಪ್ರತಿವರ್ಷ ಭಾದ್ರಪದ ಚೌತಿ ನಂತರ ಬರುವ ಸೋಮವಾರ ಅಥವಾ ಗುರುವಾರದಂದು ಮಹಾದಾಸೋಹ ಮಹೋತ್ಸವ ಜರುಗುತ್ತದೆ. ಭಕ್ತರಿಂದ, ಭಕ್ತರಿಗಾಗಿ, ಭಕ್ತರಿಗೋಸ್ಕರ ಎನ್ನುವ ಈ ಪರಂಪರೆಗೆ ಭಕ್ತಿ, ಅನ್ನ, ಅರಿವು ಎಂಬ ತ್ರಿವಿಧ ದಾಸೋಹದ ಮೂಲಕ ನಿಡಸೋಸಿಮಠ ಗಡಿಭಾಗದ ಶ್ರದ್ಧಾಕೇಂದ್ರವಾಗಿದೆ.
ರೊಟ್ಟಿ ದಾಸೋಹ: ಆ.೩೧ರಂದು ಬೆಳಗ್ಗೆ ೧೦ ಗಂಟೆಗೆ ಶ್ರೀಮಂತ ನಿಂಬಾಳ್ಕರದೇಸಾಯಿ ಅವರಿಂದ ಚಾಂದಣಿ ಪೂಜೆ ಜರುಗಲಿದೆ. ೧೧ ಗಂಟೆಗೆ ಶ್ರೀಮಠದ ಭಕ್ತರು ತರುವ ರೊಟ್ಟಿಬುತ್ತಿಗಳ ಪೂಜೆ ಬಳಿಕ ರೊಟ್ಟಿದಾಸೋಹ ಆರಂಭವಾಗಲಿದೆ. ಸಂಜೆ ೭ ಗಂಟೆಗೆ ಅಹಲ್ಯಾಬಾಯಿ ಹೋಳ್ಕರ ಜೀವನ ಚರಿತ್ರೆ ಕುರಿತು ಗುಳೇದಗುಡ್ಡದ ಶಿವಶರಣರು ನಡೆಸಿಕೊಟ್ಟ ಪ್ರವಚನ ಮಹಾಮಂಗಳ ಕಾರ್ಯಕ್ರಮ ನಡೆಯಲಿದ್ದು, ಅರಬಾವಿ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ, ಚಿಕ್ಕೋಡಿ ಸಂಪಾದನಾ ಸ್ವಾಮೀಜಿ ನೇತೃತ್ವ ವಹಿಸುವರು. ನೂಲ ಗುರುಸಿದ್ಧೇಶ್ವರ ಸ್ವಾಮೀಜಿ, ಗಡಹಿಂಗ್ಲಜದ ಮಹಾಂತ ಸಿದ್ಧೇಶ್ವರ ಸ್ವಾಮೀಜಿ, ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ಕೊಡಗು ವಿವಿ ಕುಲಪತಿ ಪ್ರೊ.ಎ.ಎಸ್.ಆಲೂರ ಭಾಗಿಯಾಗಲಿದ್ದಾರೆ.
ಮಹಾದಾಸೋಹ ಮಹೋತ್ಸವ: ಸೆ.೧ರಂದು ಬೆಳಗ್ಗೆ ೧೦ ಗಂಟೆಗೆ ಜಗದ್ಗುರು ದುರದುಂಡೀಶ್ವರ ಮಹಾಶಿವಯೋಗಿಗಳ ಉತ್ಸವ ಮೂರ್ತಿಯ ಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯಮೇಳಗಳೊಂದಿಗೆ ಜರುಗಲಿದೆ. ಮಧ್ಯಾಹ್ನ ೧೨ ಗಂಟೆಗೆ ಮಹಾದಾಸೋಹ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಮಹಾದಾಸೋಹ ಪೂಜಾ ಸಮಾರಂಭ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಅವರಿಂದ ಜರುಗಲಿದೆ. ಅರಬಾವಿ ಗುರುಬಸವಲಿಂಗ ಸ್ವಾಮೀಜಿ, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಂಡವಾಡ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಜ್ಞಾನದಾಸೋಹ: ಸೆ.೨ರಂದು ಸಂಜೆ ಗಂಟೆಗೆ ಜ್ಞಾನದಾಸೋಹ ಜರುಗಲಿದ್ದು, ಇಳಕಲ್ಲ ಗುರುಮಹಾಂತೇಶ್ವರ ಸ್ವಾಮೀಜಿ, ಚಿತ್ರದುರ್ಗ ಸಿದ್ಧಯ್ಯನಕೋಟೆಯ ಬಸವಲಿಂಗ ಸ್ವಾಮೀಜಿ, ಹುಕ್ಕೇರಿ ಶಿವಬಸವ ಸ್ವಾಮೀಜಿ, ಕುಂದರಗಿ ಡಾ.ಅಮರಸಿದ್ಧೇಶ್ವರ ಸ್ವಾಮೀಜಿ, ಕಮತೇನಟ್ಟಿಯ ಗುರುದೇವ ದೇವರು, ಜಮಖಂಡಿ ಆನಂದ ದೇವರು ನೇತೃತ್ವ ವಹಿಸುವರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಬಸವರಾಜ ದಲಾಲ, ಸಾಹಿತಿಗಳಾದ ಬಸವರಾಜ ಜಗಜಂಪಿ, ಡಾ.ಎ.ಬಿ.ಘಾಟಗೆ, ಶಿವಾನಂದ ದಾಶಾಳ ಆಗಮಿಸಲಿದ್ದಾರೆ. ಡಾ.ಶಂಕರ ಹೆಗಡೆ ಅವರ ಸನ್ಮಾನ ಕಾರ್ಯಕ್ರಮ ಜರುಗಲಿದೆ.