ಇಂದಿನಿಂದ ಜೀವಾಪುರ ಬಸವೇಶ್ವರ ಜಾತ್ರೆ

17TLR2
Published on

ತಲ್ಲೂರ: ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತರ ಆರಾಧ್ಯ ದೈವ ಜಾಲಿಕಟ್ಟಿ ಜೀವಾಪುರ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ ಆ. 18ರಿಂದ 21ರ ವರೆಗೆ ಅದ್ದೂರಿಯಾಗಿ ಜರುಗಲಿದೆ.

ದೇವಸ್ಥಾನ ವಿಶೇಷ: ಜಾಲಿಕಟ್ಟಿ ಕ್ಷೇತ್ರ ಋಷಿಮುನಿಗಳ ತಪೋವನ, ದೇವಸ್ಥಾನದಲ್ಲಿ ಕಪ್ಪು ಕಲ್ಲಿನಲ್ಲಿ ಕೆತ್ತಿದ ನಂದಿ ವಿಗ್ರಹವಿದೆ. ದೇವಸ್ಥಾನ ಎದುರು ವೀರಭದ್ರೇಶ್ವರ, ಶಿವಪಾರ್ವತಿ, ನೀಲಾಂಬಿಕಾ, ನವಗ್ರಹ ದೇಗುಲ ಇವೆ. ಬೆಟ್ಟದ 117 ಮೆಟ್ಟಿಲಗಳನ್ನೇರಿ ಬಂದರೆ ಕೂಗುವ ಬಸವಣ್ಣ ದೇವಾಲಯವಿದೆ.

ಇತಿಹಾಸ: 2ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಾದ ನಂತರ ಶರಣರು ಕಲ್ಯಾಣ ತೊರೆದು ರಾಜ್ಯದ ಪಶ್ಚಿಮ ಕರಾವಳಿಯ ಮೂಲೆಮೂಲೆಗಳಲ್ಲಿ ಸಂಚರಿಸಿದರು. ಗೊಡಚಿ, ಕಡಕೋಳ, ಚುಂಚನೂರ ಮಾರ್ಗವಾಗಿ ಜಾಲಿಕಟ್ಟಿಗೆ ಆಗಮಿಸಿ ಬೆಟ್ಟದ ಪ್ರದೇಶಗಳಲ್ಲಿ ತಂಗಿದ್ದರು. ಕೆಲಕಾಲ ಜಾಲಿಗಿಡದ ಬುಡದಲ್ಲಿ ತಂಗಿ ಪೂಜೆ ಮಾಡಿದರು. ಇದರಿಂದ ಈ ಪ್ರದೇಶಕ್ಕೆ ಜಾಲಿಕಟ್ಟಿ ಎಂದು ನಾಮಕರಣ ಮಾಡಿ, ಶ್ರೀ ಬಸವೇಶ್ವರ ದೇವಸ್ಥಾನ ನಿರ್ಮಿಸಲಾಗಿದೆ ಎಂಬ ಪ್ರತೀತಿ ಇದೆ. ನಾಗರ ಪಂಚಮಿಯಿಂದ ಒಂದು ತಿಂಗಳ ಕಾಲ ಶಿವಭಜನೆ, ಮಹಾರುದ್ರಾಭಿಷೇಕ, ವಿವಿಧ ಧಾರ್ಮಿಕ ಪೂಜೆಗಳು, ಪ್ರತಿ ಶ್ರಾವಣ ಸೋಮವಾರ ಅನ್ನಪ್ರಸಾದ ಇರುತ್ತದೆ.

ವಿಶೇಷ ಕಾರ್ಯಕ್ರಮ: ಆ.18ರಂದು ಬೆಳಗ್ಗೆ 5.15ರಿಂದ 9ರ ವರೆಗೆ ಶ್ರೀ ಬಸವೇಶ್ವರ ಹಾಗೂ ಈಶ್ವರ ದೇವರಿಗೆ ನಿರಂತರ ರುದ್ರಾಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಪಂಚಾಮೃತ ನಡರೆಯಲಿದೆ. ನಂತರ ತಲ್ಲೂರ ದೇಸಾಯಿ ವಾಡೆ, ಜೀವಾಪುರ ಗ್ರಾಮದಿಂದ ಆರತಿ ಹಾಗೂ ಮದ್ಲೂರ ಗ್ರಾಮದ ಕುರಿಯವರ ಮನೆಯಿಂದ ನೈವೇದ್ಯ ತರಲಾಗುತ್ತದೆ. ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 4 ಗಂಟೆಗೆ ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡುವರು. ಸಂಜೆ 6 ಗಂಟೆಗೆ ದೀಪಸ್ತಂಭಕ್ಕೆ ಅಲಂಕಾರ ಜರುಗುವುದು.

ಆ.19ರಂದು ರಾತ್ರಿ 10.30ಕ್ಕೆ ಶ್ರೀ ಬಸವೇಶ್ವರ ಯಂಗ ಸ್ಟಾರ್ ನಾಟ್ಯ ಸಂಘದಿಂದ ಮಗ ಹೋದರು ಮಾಂಗಲ್ಯ ಬೇಕು ನಾಟಕವಿದೆ. ಆ.20ರಂದು ವಿವಿಧ ಕಾರ್ಯಕ್ರಮ ಜರುಗಲಿವೆ. ಆ.21ರಂದು ರಥದ ಕಳಸ ಇಳಿಸುವುದರೊಂದಿಗೆ ಜಾತ್ರೆ ಮಂಗಲಗೊಳ್ಳುವುದು ಎಂದು ಜಾತ್ರಾ ಕಮಿಟಿ ಕಾರ್ಯದರ್ಶಿ ಚೆನ್ನಯ್ಯ ಪೂಜೇರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net