ಕಳ್ಳನಿಂದ ಮತ್ತೆ 12 ಬೈಕ್ ವಶಕ್ಕೆ

6-hrbd-1-Bike Theft-Web
ಬೈಕ್ ಕಳ್ಳನನ್ನು ಬಂಧಿಸಿದ ಹಿರೇಬಾಗೇವಾಡಿ ಪೊಲೀಸರು, ಆತ ಕದ್ದ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಪಿಐ ನಾಗರಾಜ ಅಂಬಿಗೇರ ಎಎಸ್‌ಐಗಳಾದ ಡಿ.ಎಲ್. ಬಲವಗಿ ಮತ್ತು ಎಂ.ಡಿ. ಪಟ್ಟಣದ ಹಾಗೂ ಸಿಬ್ಬಂದಿ ಇದ್ದಾರೆ.
Published on

ಹಿರೇಬಾಗೇವಾಡಿ: ಇತ್ತೀಚೆಗೆ ಬೈಕ್‌ಗಳನ್ನು ಕದ್ದು ಹಿರೇಬಾಗೇವಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಕಳ್ಳನಿಂದ ಶುಕ್ರವಾರ ಮತ್ತಷ್ಟು ವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಆತನಿಂದ ಬೈಕ್ ಖರೀದಿಸಿದವರನ್ನೂ ಬಂಧಿಸಿದ್ದಾರೆ. ತಿಗಡಿ ಗ್ರಾಮದ ಬೈಕ್ ಕಳ್ಳ ಆಝಾದ್ ಮೆಹಬೂಬಸುಭಾನಿ ಕಿಲ್ಲೇದಾರ (26) ಎಂಬಾತನನ್ನು ಬಂಧಿಸಿರುವ ಪೊಲೀಸರು, ಆತನಿಂದ ಈಗಾಗಲೇ 1.90 ಲಕ್ಷ ರೂಪಾಯಿ ಬೆಲೆ ಬಾಳುವ ಐದು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆಝಾದ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆತ 4 ಹೊಂಡಾ ಶೈನ್, 4 ಹೀರೋ ಹೊಂಡಾ, 2 ಯಮಹಾ ಮತ್ತು 2 ಟಿವಿಎಸ್ ಬೈಕ್ ಸೇರಿ ಒಟ್ಟು 4.45 ಲಕ್ಷ ರೂಪಾಯಿ ಬೆಲೆ ಬಾಳುವ 12 ಬೈಕ್‌ಗಳನ್ನು ಕದ್ದಿರುವುದು ತಿಳಿದುಬಂದಿದೆ. ಅವುಗಳನ್ನೂ ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಾಲ್ವರು ಖರೀದಿದಾರರ ಬಂಧನ: ಇವುಗಳು ಕದ್ದ ಬೈಕ್‌ಗಳು ಎಂದು ತಿಳಿದ ಬಳಿಕವೂ ಅವನ್ನು ಖರೀದಿ ಮಾಡಿದ್ದ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದವರಾದ ರುದ್ರಪ್ಪ ತಿಪ್ಪಣ್ಣ ನಂದಿ, ರುದ್ರಪ್ಪ ಯಲ್ಲಪ್ಪ ತಿಪ್ಪಣ್ಣವರ, ಸಿದ್ಧಪ್ಪ ಫಕೀರಪ್ಪ ಯರಗುದ್ದಿ ಹಾಗೂ ನೀಲಪ್ಪ ಬಸವಣ್ಣೆಪ್ಪ ಜೋಳದ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಅವರು ಖರೀದಿಸಿದ್ದ ಕಳ್ಳತನದ ಬೈಕ್‌ಗಳನ್ನು ವಶಪಡಿಸಿಕೊಂಡು ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಬೆಳಗಾವಿ ಸೇರಿ ವಿವಿಧೆಡೆ ಕಳುವಾಗಿದ್ದ ಬೈಕ್ ಮಾಲೀಕರು ದಾಖಲೆಯೊಂದಿಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net