

ಸಿಂಧನೂರು: ಅಸ್ಪಶ್ಯತೆ, ಜಾತಿಯಿಂದ ನಮ್ಮನ್ನು ನಾವೇ ಒಡೆದಾಳುವ ಬದಲಿಗೆ ನಾವೆಲ್ಲರೂ ಹಿಂದುಗಳೆಂದು ಒಗ್ಗೂಡಿ ಮುನ್ನಡೆಯಬೇಕಾದ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಹಿಂದು ಮಹಾಗಣಪತಿ ಉತ್ಸವ ಸಮಿತಿಯಿಂದ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸನಾತನ ಪರಂಪರೆಯಿಂದ ಬಂದ ನಾವು ಅನಾದಿ ಕಾಲದಿಂದಲೂ ‘ದೇವನೊಬ್ಬ ನಾಮ ಹಲವು’ ಎಂಬ ನಂಬಿಕೆಯಿಂದ ಸಾಗಿದ್ದೇವೆ. ಆದರೆ, ಅನ್ಯ ಕೋಮಿನವರು ನಮಗೊಬ್ಬರೇ ದೇವರು, ಬೇರೆ ದೇವರಿಲ್ಲ ಎನ್ನುತ್ತಿದ್ದಾರೆ.
ಗಣೇಶ, ರಾಮನ ಮೆರವಣಿಗೆ ಸಂದರ್ಭದಲ್ಲಿ ನಡೆಯುತ್ತಿರುವ ಕಲ್ಲು ತೂರಾಟ, ದಾಂಧಲೆಗಳು ಬೇರೆ ಸಮಯದಲ್ಲಿ ಆಗಲ್ಲ. ನಾವೆಲ್ಲರೂ ಜಾಗೃತರಾಗುವ ಕಾಲಘಟ್ಟದಲ್ಲಿ ಇದ್ದೇವೆ. ಈಗ ಎಚ್ಚರಗೊಳ್ಳದಿದ್ದರೆ ನಾವು ಸಹ ಬಾಂಗ್ಲಾ ವಲಸಿಗರಂತೆ ಆಗಬಹುದಾಗಿದೆ. ಹೀಗಾಗಿ ಪ್ರತಿಯೊಬ್ಬ ಹಿಂದುಗಳು ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಸಮುದಾಯದ ಜನಸಂಖ್ಯೆ ಕಡಿಮೆಯಾಗದಂತೆ ಮತ್ತು ಹಿಂದು ಧರ್ಮದ ರಕ್ಷಣೆಗೆ ಮುಂದಾಗಬೇಕು ಎಂದರು.
ವೆಂಕಟಗಿರಿಕ್ಯಾಂಪ್ ಸಿದ್ಧಾಶ್ರಮದ ಸದಾನಂದ ಶರಣರು ಮಾತನಾಡಿ, ಹಿಂದು ಸಮಾಜವನ್ನು ಒಡೆಯುವ ಯತ್ನಗಳು ಒಳಗೊಳಗೆ ನಡೆದಿವೆ. ಹೀಗಾಗಿ ಸಮುದಾಯದ ಜನರು ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ವಿಶ್ವ ಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಸೇಡಂ, ಹಿಂದು ಗಣಪತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವರಾಜ ನಾಡಗೌಡ, ಅಧ್ಯಕ್ಷ ಸುರೇಶ ನೆಕ್ಕಂಟಿ ಇದ್ದರು. ಪ್ರಹ್ಲಾದ್ ಕೆಂಗಲ್ ನಿರೂಪಿಸಿದರು.