

ಬೆಳಗಾವಿ: ದೆಹಲಿಯಲ್ಲಿ ನಿಧರಾದ ಸಚಿವ ಸುರೇಶ ಅಂಗಡಿ ಪಾರ್ಥಿವ ಶರೀರ ಬೆಳಗಾವಿಗೆ ತಂದು ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಬಹುದಿತ್ತು. ಆದರೆ, ಕೇಂದ್ರ ಮತ್ತು ರಾಜ್ಯಬಿಜೆಪಿ ಸರ್ಕಾರಗಳು ಅಂಗಡಿ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಟೀಕಿಸಿದ್ದಾರೆ.
ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಭವನ ಉದ್ಘಾಟನೆ ಹಿನ್ನೆಲೆಯಲ್ಲಿ ಶುಕ್ರವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಅಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿ ತರುವುದು ಸರ್ಕಾರಕ್ಕೆ ದೊಡ್ಡ ಕೆಲಸವಾಗಿರಲಿಲ್ಲ. ಬೆಳಗಾವಿಯಲ್ಲಿ ಮಿಲಿಟರಿ ಬೇಸ್ ಇದೆ. ಆದರೂ ಈ ವಿಷಯದಲ್ಲಿ ಬಿಜೆಪಿ ನಾಯಕರು, ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ನಿರ್ಲಕ್ಷೃ ಮಾಡಿವೆ ಎಂದು ಆರೋಪಿಸಿದರು.
ಸುರೇಶ ಅಂಗಡಿ ಅವರ ಸಾವಿಗೂ ಮುಂಚೆ ಎರಡು ತಿಂಗಳಿನಿಂದ ದೆಹಲಿ ಮತ್ತು ರಾಜ್ಯಮಟ್ಟದಲ್ಲಿ ಹೊಸ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದವು ಎಂದು ಸ್ವತಃ ಅಂಗಡಿ ಕುಟುಂಬ ಸದಸ್ಯರೇ ತಿಳಿಸಿದ್ದಾರೆ. ಆದರೂ ದೆಹಲಿಯಲ್ಲಿಯೇ ಅಂತ್ಯಸಂಸ್ಕಾರ ನಡೆಸುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಂಗಡಿ ಕುಟುಂಬಕ್ಕೆ ಅನ್ಯಾಯ ಮಾಡಿವೆ ಎಂದು ಡಿ.ಕೆ.ಶಿವಕುಮಾರ ಆರೋಪಿಸಿದರು.
ಉತ್ತರ ಪ್ರದೇಶದಲ್ಲಿ ಯುವತಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.ಅಲ್ಲಿನ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಅಲ್ಲಿರುವುದು ಯೋಗಿ ಸರ್ಕಾರವಲ್ಲ, ರೋಗಿ ಸರ್ಕಾರ ಎಂದು ಡಿ.ಕೆ. ಶಿವಕುಮಾರ ಟೀಕಿಸಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕಾಂಗ್ರೆಸ್ ಕಿಸಾನ್ ಘಟಕ ಜಿಲ್ಲಾಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಪಕ್ಷದ ಪಕ್ಷದ ಕಾರ್ಯಕರ್ತರು ಇನ್ನಿತರರು ಇದ್ದರು.