

ಸಂಡೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 16 ತಿಂಗಳಿಂದ ಹಗರಣಗಳಲ್ಲಿ ತೊಡಗಿಕೊಂಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಸಿಎಂ ಸಿದ್ದರಾಮಯ್ಯ 1050 ಸೈಟ್‌ಗಳ ಹಗರಣ ಮಾಡಿದ್ದಾರೆ. ಎಸ್ಟಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ಶಾಸಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187ಕೋಟಿ ರೂ. ಹಗರಣ ಮಾಡಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಮೋಸ ಮಾಡಿ ಚುನಾವಣೆ ಪ್ರಚಾರಕ್ಕೆ ಹೇಗೆ ಬರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಅಬಕಾರಿ ಮಂತ್ರಿ ಒಂದು ವಾರದಲ್ಲಿ ಒಂದು ಸಾವಿರ ಕೋಟಿ ರೂ. ವಸೂಲಿ ಮಾಡಿದ್ದಾರೆ. ಈ ಸರ್ಕಾರಕ್ಕೆ ಮಾನ ಮಾರ್ಯಾದೆ ಇಲ್ಲ. ಸ್ವತಃ ಮುಖ್ಯಮಂತ್ರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಿಗಳಿಗೆ ಸಾವಿನ ಭಾಗ್ಯ ನೀಡಿದ್ದಾರೆ ಎಂದು ದೂರಿದರು.
ರಘುನಾಥ ಎಂಬ ಕಾನ್‌ಸ್ಟೇಬಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಯಾಳಿಸಿ ವಾಟ್ಸಾೃಪ್ ಸ್ಟೇಟಸ್ ಹಾಕಿದ್ದಾರೆ. ಸಿಪಿಐ ಮಹೇಶ್ ಗೌಡ ಎಂಬುವವರು 12 ವರ್ಷಗಳಿಂದ ಸಂಡೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಇವರೆಲ್ಲ ಸರ್ಕಾರದ ಸೇವಕರು ಎಂಬುದನ್ನು ಮರೆತು ಕಾಂಗ್ರೇಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಆರ್.ಅಶೋಕ ಹೇಳಿದರು. ಶಾಸಕರಾದ ಜನಾರ್ದನರೆಡ್ಡಿ, ನೇಮಿರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಇದ್ದರು.