

ಮೂಡಿಗೆರೆ: ಸಾರ್ವಜನಿಕರು ಬಳಸುತ್ತಿದ್ದ ರಾಜ್ಯಹೆದ್ದಾರಿ ವಿರಾಜಪೇಟೆ ಮತ್ತು ಬೈಂದೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಉಪ ರಸ್ತೆಯನ್ನು ಏಕಾಏಕಿ ಆರೋಗ್ಯ ಇಲಾಖೆ ಬಂದ್ ಮಾಡಿ ಕಾಂಪೌಂಡ್ ನಿರ್ಮಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಎದುರಾಗಿದೆ ಎಂದು ಸ್ಥಳೀಯ ದೂರಿದ್ದಾರೆ.
ಸ್ಥಳೀಯ ನಿವಾಸಿ ಎಂ.ಎನ್.ಸದಾಶಿವ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಪ್ರದೇಶದಲ್ಲಿ ಸುಮಾರು 50ಕ್ಕೂ ಅಧಿಕ ರೈತ ಕುಟುಂಬಗಳು 1970ರಿಂದಲೂ ಕೃಷಿ ಭೂಮಿ, ವಾಸದ ಮನೆಗಳಿಗೆ ತೆರಳಲು ಇದೇ ರಸ್ತೆ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ರಸ್ತೆ ಬದಿಯಲ್ಲಿ ಉದ್ಭವ ಗಂಗಾಧರೇಶ್ವರ ದೇವಸ್ಥಾನವಿದೆ. ಈ ದೇವಾಲಯಕ್ಕೆ ಗ್ರಾಪಂ ಹಾಗೂ ತಾಪಂ ಅನುದಾನದಲ್ಲಿ ಸಭಾಂಗಣದ ಅಭಿವೃದ್ಧಿ ನಡೆಸಲಾಗಿದೆ. 1988ರಲ್ಲಿ ಹಳೇಮೂಡಿಗೆರೆ ಗ್ರಾಪಂಮಟ್ಟದಲ್ಲಿ ಈ ರಸ್ತೆಗೆ ಅನುಮತಿ ನೀಡಿ, ನರೇಗಾ ಯೋಜನೆಯಡಿಯಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ಈ ಪ್ರದೇಶದಲ್ಲಿ ಈಗಾಗಲೇ ಹೊಸ ಲೇಔಟ್ ಅಭಿವೃದ್ಧಿಗೊಳಿಸುತ್ತಿದ್ದು ನಿಯಮಾನುಸಾರವಾಗಿ 30*40ಅಡಿ ರಸ್ತೆ, ಚರಂಡಿ, ವಿದ್ಯುತ್ ಕಂಬ ಹಾಕಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಆರೋಗ್ಯ ಇಲಾಖೆಗೆ ಸೇರಿದ್ದ ಜಾಗಕ್ಕೆ ಹೊಂದಿಕೊಂಡಿರುವ ರಸ್ತೆಯನ್ನು ದಿಢೀರ್ ಬಂದ್‌ಗೊಳಿಸುವ ಜತೆಗೆ ಪಪಂ ನಿಂದ ನೀರಿನ ಸಂಪರ್ಕ ಕಡಿತಗೊಳಿಸಿದೆ ಎಂದು ದೂರಿದರು. ಸರ್ಕಾರ ಕೂಡಲೇ ಕಾಪೌಂಡ್ ತೆರವುಗೊಳಿಸಿ ರಸ್ತೆಯನ್ನು ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಂ.ಎನ್.ಸದಾಶಿವ, ಅಮೃತ್, ದಿನೇಶ್ ಬೋರಾ ಇದ್ದರು.